ಉಡುಪಿ: ಮತ್ತೆ 5 ಮಂಗಗಳ ಕಳೇಬರ ಪತ್ತೆ; ಇಬ್ಬರ ರಕ್ತ ಪರೀಕ್ಷೆ
ಉಡುಪಿ, ಜ.25: ಶುಕ್ರವಾರ ಉಡುಪಿ ಜಿಲ್ಲೆಯ ವಿವಿದೆಡೆಗಳಲ್ಲಿ ಮತ್ತೆ ಐದು ಮಂಗಗಳ ಕಳೇಬರಗಳು ಪತ್ತೆಯಾಗಿವೆ. ಇಂದು ಜ್ವರದಿಂದ ಬಾಧಿತರಾದ ಇಬ್ಬರು ರೋಗಿಗಳ ರಕ್ತವನ್ನು ಶಂಕಿತ ಮಂಗನಕಾಯಿಲೆಗಾಗಿ ಮಣಿಪಾಲದ ಸೆಂಟರ್ ಫಾರ್ ವೈರಸ್ ರಿಸರ್ಚ್ (ಎಂಸಿವಿಆರ್)ಗೆ ಕಳುಹಿಸಲಾಗಿದೆ ಎಂದು ಮಂಗನಕಾಯಿಲೆಗೆ ಜಿಲ್ಲಾ ನೋಡೆಲ್ ಅಧಿಕಾರಿ ಯಾಗಿರುವ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಇಂದು ಅಜೆಕಾರಿನ ಹೆರ್ಮುಂಡಿ, ಕರ್ಜೆಯ ಬಾಳೆಬೈಲು, ಸಾಬರಕಟ್ಟೆಯ ಶಿರಿಯಾರ, ಶಂಕರನಾರಾಯಣ ಹಾಗೂ ಶಿರ್ವಗಳಲ್ಲಿ ತಲಾ ಒಂದೊಂದು ಮೃತದೇಹ ಪತ್ತೆಯಾಗಿವೆ. ಇಂದು ಹೆಚ್ಚಿನ ದೇಹಗಳು ಕೊಳೆತಿರುವುದರಿಂದ ಯಾವುದರ ಪೋಸ್ಟ್‌ಮಾರ್ಟಂ ನಡೆಸಲಾಗಿಲ್ಲ ಎಂದವರು ಸ್ಪಷ್ಟಪಡಿಸಿದರು.
ಇದುವರೆಗೆ 28 ಮಂಗಗಳ ವಿಸೇರಾವನ್ನು ಪರೀಕ್ಷೆಗಾಗಿ ಕಳುಹಿಸಿದ್ದು, ಅವುಗಳಲ್ಲಿ 23ರ ಪರೀಕ್ಷಾ ವರದಿ ಬಂದಿವೆ. 12ರಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾದರೆ, 11ರಲ್ಲಿ ಯಾವುದೇ ರೋಗವಿರಲಿಲ್ಲ ಎಂದವರು ತಿಳಿಸಿದರು.
ಇಂದು ಸಾಗರದಿಂದ ಹಳ್ಳಿಹೊಳೆ ಗ್ರಾಪಂ ವ್ಯಾಪ್ತಿಯ ಕಬ್ಬಿನಾಲೆಗೆ ಜಾತ್ರೆಗೆಂದು ಬಂದವರು ಜ್ವರದಿಂದ ನರಳುತಿದ್ದು, ಅವರ ರಕ್ತವನ್ನು ಹಳ್ಳಿಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಕೆಎಫ್‌ಡಿವಿ ಪರೀಕ್ಷೆಗಾಗಿ ಮಣಿಪಾಲಕ್ಕೆ ಕಳುಹಿಸಿದ್ದಾರೆ.
ಅದೇ ರೀತಿ ಬ್ರಹ್ಮಾವರದ ಹೇರೂರು ಗ್ರಾಮದ ವ್ಯಕ್ತಿಯೊಬ್ಬರು ಮಂಗನ ಕಾಯಿಲೆಯ ಲಕ್ಷಣದೊಂದಿಗೆ ಜ್ವರದಿಂದ ನರಳುತಿದ್ದು, ಅವರ ರಕ್ತವನ್ನು ಬ್ರಹ್ಮಾವರ ಪಿಎಚ್‌ಸಿಯ ವೈದ್ಯರು ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಎಂಟು ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದ್ದು, ಇವರಲ್ಲಿ ಆರು ಮಂದಿಯ ರಕ್ತದಲ್ಲಿ ಕೆಎಫ್‌ಡಿ ವೈರಸ್ ಕಂಡುಬಂದಿಲ್ಲ. ಇಂದು ಕಳುಹಿಸಿದ ಇಬ್ಬರ ಸ್ಯಾಂಪಲ್ ವರದಿ ಇನ್ನಷ್ಟೇ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ.