ಸರಕಾರಿ ಶಾಲೆಯಲ್ಲಿ ಲಿತವರಿಗೆ ಶೇ.50ರಷ್ಟು ಮೀಸಲಾತಿ: ಸರಕಾರಿ ಶಾಲೆಗಳ ಉನ್ನತೀಕರಣ ಕಾರ್ಯಕ್ರಮದಲ್ಲಿ ಒತ್ತಾಯ
ಉಡುಪಿ, ಜ. 25: ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ, ಉಡುಪಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವ ಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಹಯೋಗ ದೊಂದಿಗೆ ನಡೆದ ಸರಕಾರಿ ಶಾಲೆಗಳ ಉನ್ನತೀಕರಣ ಕಾರ್ಯಕ್ರಮ ‘ನಾ ಕಲಿತ ಶಾಲೆಯ ತೀರಿಸುವೆ ಋಣವ- ಇದು ನನ್ನ ಜವಾಬ್ದಾರಿ’ ಆಂದೋಲನದಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗದಲ್ಲಿ ಶೇ.50 ರಷ್ಟು ಮೀಸಲಾತಿ ನೀಡಬೇಕೆಂಬ ಒತ್ತಾಯ ಕೇಳಿಬಂತು.
ವಳಕಾಡು ಸರಕಾರಿ ಸಂಯುಕ್ತ ಪ್ರೌಢ ಶಾಲೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಸರಕಾರಿ ಶಾಲೆಗಳ ಹಳೆ ವಿದ್ಯಾರ್ಥಿ ಸಂಘ ಹಾಗೂ ಶಾಲಾಭಿವೃದ್ದಿ ಸಮಿತಿಯ ಪದಾಧಿಕಾರಿಗಳಾದ ನಂದಳಿಕೆ ಸರಕಾರಿ ಶಾಲೆಯ ಬಾಲಕೃಷ್ಣ ಶೆಟ್ಟಿ, ಆವರ್ಸೆ ಶಾಲೆಯ ಆಝಾದ್ ಮುಹಮ್ಮದ್, ಅಮಾಸೆಬೈಲು ಶಾಲೆಯ ಶಂಕರ ನಾರಾಯಣ ಐತಾಳ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಶಿರೂರು ಸರಕಾರಿ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ತಾಪಂ ಸದಸ್ಯ ಪುಷ್ಪರಾಜ್ ಶೆಟ್ಟಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗದಲ್ಲಿ ಶೇ.50ರಷ್ಟು ಮೀಸಲಾತಿ ನೀಡಬೇಕು. ಇದರಿಂದ ಮಾತ್ರ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಿ ಶಾಲೆ ಉಳಿಯುವಂತೆ ಮಾಡಬಹುದು. ಅದೇ ರೀತಿ ಸರಕಾರಿ ಶಾಲೆಗಳ ಉನ್ನತೀಕರಣ ಮುಖ್ಯವಾಗಿ ಮಕ್ಕಳನ್ನು ಕರೆತರಲು ವಾಹನಗಳ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ನಿಜವಾದ ಶಿಕ್ಷಣ ಪ್ರೇಮಿಗಳು ಮುಚ್ಚುಗಡೆ ಹಂತದಲ್ಲಿರುವ ಸರಕಾರಿ ಶಾಲೆಗಳನ್ನು ಉನ್ನತೀಕರಣಗೊಳಿಸುವ ಹಳೆ ವಿದ್ಯಾರ್ಥಿಗಳೇ ಹೊರತು ಉನ್ನತ ಶಿಕ್ಷಣದ ಕಾಲೇಜುಗಳನ್ನು ನಿರ್ಮಿಸಿ ಶಿಕ್ಷಣವನ್ನು ವ್ಯಾಪಾರೀಕರಣಗೊಳಿ ಸಿರುವವರಲ್ಲ. ಸರಕಾರಿ ಶಾಲೆಗಳ ಉನ್ನತೀಕರಣಕ್ಕೆ ಹಳೆ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಜೊತೆ ಜನಪ್ರತಿನಿಧಿಗಳು ಕೂಡ ಕೈಜೋಡಿಸಬೇಕಾಗಿದೆ. ಆಗ ಮಾತ್ರ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಸರಕಾರಿ ಪ್ರೌಢಶಾಲೆಗಳ ಒಟ್ಟು 29 ಉತ್ತಮ ಹಳೆ ವಿದ್ಯಾರ್ಥಿ ಸಂಘಗಳನ್ನು ಗುರುತಿಸಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ವಹಿಸಿ ದ್ದರು. ಸಂದಿಗ್ಧ ಚಲನಚಿತ್ರದ ನಟರಾದ ಸುಚೇಂದ್ರ ಪ್ರಸಾದ್, ಮಹೇಶ್ ದೇವು, ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ವಿ.ಕೆ. ನಾರಾಯಣ್, ಉಡುಪಿ ಡಿವೈಎಸ್ಪಿ ಜೈಶಂಕರ್ ಮುಖ್ಯ ಅತಿಥಿಗಳಾಗಿದ್ದರು.
ಒಳಕಾಡು ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ಶ್ಯಾಮ್‌ಪ್ರಸಾದ್ ಕುಡ್ವ, ಪ್ರಾಂಶುಪಾಲೆ ನಿರ್ಮಲಾ ಬಿ., ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ್ ಕಾಮತ್, ಉಮಾ, ಓ.ಆರ್.ಪ್ರಕಾಶ್, ವಿ.ಜೆ.ನಾಯಕ್, ಹೇಮಲತಾ ಮೊದ ಲಾದವರು ಉಪಸ್ಥಿತರಿದ್ದರು.
ಆಯೋಗದ ಸದಸ್ಯೆ ಡಾ.ವನಿತಾ ತೋರವಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಜಿಲ್ಲಾ ಪ್ರಭಾರ ಮಕ್ಕಳ ರಕ್ಷಣಾಧಿಕಾರಿ ವೀಣಾ ಸ್ವಾಗತಿಸಿದರು. ಶಿಕ್ಷಕಿ ಜಯಂತಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬಾಲ್ಯ ವಿವಾಹ ಕುರಿತ ‘ಸಂದಿಗ್ಧ’ ಮಕ್ಕಳ ಚಲನಚಿತ್ರ ಪ್ರದರ್ಶನಗೊಂಡಿತು.