ಉಡುಪಿ: ಮತದಾರರ ದಿನಾಚರಣೆ ಬೃಹತ್ ಜಾಥಾ ಉದ್ಘಾಟನೆ
ಉಡುಪಿ, ಜ.25: ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಉಡುಪಿಯ ಬೋರ್ಡ್ ಹೈಸ್ಕೂಲ್‌ನಿಂದ ಪುರಭವನದವರೆಗೆ ನಡೆದ ಕಾಲೇಜು ವಿದ್ಯಾರ್ಥಿಗಳ ಬೃಹತ್ ಜಾಥಾವನ್ನು ಉಡುಪಿ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು ಬಿ ರೂಪೇಶ್ ಶುಕ್ರವಾರ ಉದ್ಘಾಟಿಸಿದರು.
ಜಾಥಾದಲ್ಲಿ ಮೊದಲ ಬಾರಿ ಮತದಾರರಾಗಿ ನೊಂದಣಿಯಾಗಿರುವ ಯುವ ಮತದಾರರನ್ನು ಕುದುರೆ ಮತ್ತು ಒಂಟೆಯ ಮೇಲೆ ಮೆರವಣಿಗೆ ಮಾಡಲಾ ಯಿತು. ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಿರ್ಮಿಸಿದ್ದ ಮತದಾನ ಜಾಗೃತಿ ಸಾರುವ ಟ್ಯಾಬ್ಲೋ, ಕೊರಗರ ಡೋಲು, ವೀರಗಾಸೆ, ಮಹಿಳಾ ಚಂಡೆ ಬಳಗ ಸೇರಿದಂತೆ ವಿವಿಧ ಕಲಾತಂಡಗಳು ಜಾಥಾಕ್ಕೆ ಮೆರಗು ನೀಡಿದವು.
ನಗರದ ವಿವಿಧ ಕಾಲೇಜುಗಳ ಸುಮಾರು 1500ಕ್ಕೂ ಅಧಿಕ ವಿದ್ಯಾರ್ಥಿಗಳು ಮತದಾನ ಜಾಗೃತಿ ಸಾರುವ ಪ್ರದರ್ಶನ ಫಲಕಗಳೊಂದಿಗೆ ಬೃಹತ್ ಜಾಥಾದಲ್ಲಿ ಪಾಲ್ಗೊಂಡರು.
ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಭಾಸ್ಕರ್ ಶೆಟ್ಟಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಭಾಗವಹಿಸಿದ್ದರು.