×
Ad

ಮೂಡುಬೆಳ್ಳೆ: ಕೈಕಾಲು ಕಟ್ಟಿ, ಕುತ್ತಿಗೆ ಬಿಗಿದು ಕೂಲಿ ಕಾರ್ಮಿಕನ ಕೊಲೆ

Update: 2019-01-25 21:58 IST

ಶಿರ್ವ, ಜ.25: ಕೈಕಾಲು, ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಅದೇ ಹಗ್ಗವನ್ನು ಮರಕ್ಕೆ ಕಟ್ಟಿ ಹಾಕುವ ಮೂಲಕ ಕೂಲಿ ಕಾರ್ಮಿಕರೊಬ್ಬರನ್ನು ವಿಚಿತ್ರ ರೀತಿಯಲ್ಲಿ ಕೊಲೆ ಮಾಡಿರುವ ಘಟನೆ ಮೂಡುಬೆಳ್ಳೆ ಗ್ರಾಮದ ಎಡ್ಮೇರು ತಾಕಡಬೈಲು ಎಂಬಲ್ಲಿರುವ ಹಾಡಿಯಲ್ಲಿ ಶುಕ್ರವಾರ  ಮಧ್ಯಾಹ್ನ ನಡೆದಿದೆ.

ಮೃತರನ್ನು ಮೂಡುಬೆಳ್ಳೆಯ ಆ್ಯಂಡ್ರೂ ಮಾರ್ಟಿಸ್ (55) ಎಂದು ಗುರುತಿಸಲಾಗಿದೆ.

ತಾಕಡಬೈಲು ಸಂತೋಷ್ ಶೆಟ್ಟಿ ಎಂಬವರ ಹಾಡಿಗೆ ತೆರಳಿದ್ದ ರಾಜೇಶ್ ಎಂಬವರಿಗೆ ಆ್ಯಂಡ್ರೂ ಮಾರ್ಟಿಸ್ ಹಗ್ಗದಿಂದ ಬಿಗಿದು ಮೃತಪಟ್ಟಿರುವುದು ಕಂಡುಬಂತು. ಕೂಡಲೇ ಅವರು ಬೇರೆಯವರ ಮೂಲಕ ಈ ವಿಚಾರವನ್ನು ಮೃತರ ತಂಗಿ ಜೆಸ್ಟಿ ಸಲ್ದಾನ ಅವರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಬಂದು ನೋಡುವಾಗ ಆ್ಯಂಡ್ರೂ ಮಾರ್ಟಿಸ್ ಅವರನ್ನು ಹಗ್ಗದಿಂದ ಕೈ ಕಾಲು ಕಟ್ಟಿ ಕುತ್ತಿಗೆಯನ್ನು ಬಿಗಿದು, ನಂತರ ಆ ಹಗ್ಗದ ಇನ್ನೊಂದು ತುದಿ ಯನ್ನು ಮರಕ್ಕೆ ಕಟ್ಟಿ ಹಾಕಿರುವುದು ಕಂಡು ಬಂದಿದೆ. ಕೂಲಿ ಕೆಲಸ ಮಾಡುವ ಇವರಿಗೆ ಮೂವರು ಮಕ್ಕಳಿದ್ದಾರೆ. ಈ ಬಗ್ಗೆ ಜೆಸ್ಟಿ ಸಲ್ದಾನ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರು ಆರೋಪಿಗಳು ವಶಕ್ಕೆ?

ಇಂದು ಬೆಳಗ್ಗೆ 9:45ರ ಸುಮಾರಿಗೆ ಆ್ಯಂಡ್ರೋ ಮಾರ್ಟಿಸ್ ತನ್ನ ಮನೆಯ ಎದುರು ಇಬ್ಬರು ಅಪರಿಚಿತರೊಂದಿಗೆ ಸ್ಕೂಟರ್‌ನಲ್ಲಿ ಹೋಗುತ್ತಿರುವುದನ್ನು ಅವರ ತಂಗಿ ಜೆಸ್ಟಿ ಸಾಲ್ದಾನ ನೋಡಿದ್ದಾರೆನ್ನಲಾಗಿದೆ.

ಮಾರ್ಟಿಸ್ ಸ್ಕೂಟರ್‌ನಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳ ಮಧ್ಯೆ ಕುಳಿತಿದ್ದು, ಮನೆಯ ಮುಂದೆ ನಿಂತಿದ್ದ ತಂಗಿಗೆ ಕೈ ತೋರಿಸಿಕೊಂಡು ಹೋಗಿದ್ದರೆಂದು ತಿಳಿದುಬಂದಿದೆ. ಈ ಆಧಾರದಲ್ಲಿ ತನಿಖೆ ಆರಂಭಿಸಿರುವ ಶಿರ್ವ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News