ಮತದಾನದ ಪವಿತ್ರ ಕಾರ್ಯವನ್ನು ನಿಭಾಯಿಸಿ: ಜನರಿಗೆ ರಾಷ್ಟ್ರಪತಿ ಕರೆ

Update: 2019-01-25 16:54 GMT

ಹೊಸದಿಲ್ಲಿ,ಜ.25: ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಮತದಾನದ ಪವಿತ್ರ ಕಾರ್ಯವನ್ನು ನಿಭಾಯಿಸುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಜನರಿಗೆ ಕರೆ ನೀಡಿದ್ದಾರೆ. ಈ ಚುನಾವಣೆಯನ್ನು 21ನೇ ಶತಮಾನದ ಉಳಿದ ಭಾಗದಲ್ಲಿ ಭಾರತದ ರೂಪುರೇಶೆ ನಿರ್ಧರಿಸುವ ಶತಮಾನದ ಕ್ಷಣ ಎಂದು ಅವರು ವ್ಯಾಖ್ಯಾನಿಸಿದ್ದಾರೆ. 70ನೇ ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಕೋವಿಂದ್, ಚುನಾವಣೆ ಎನ್ನುವುದು ಕೇವಲ ರಾಜಕೀಯ ಪ್ರಕ್ರಿಯೆಯಲ್ಲ. ಅದು ಸಾಂಘಿಕ ಜಾಣ್ಮೆ ಮತ್ತು ಕ್ರಿಯೆಯನ್ನು ಬಯಸುತ್ತದೆ. 17ನೇ ಲೋಕಸಭೆಯನ್ನು ಚುನಾಯಿಸುವಲ್ಲಿ ನಮ್ಮ ಪ್ರಜಾಪ್ರಭುತ್ವದ ಕಲ್ಪನೆ ಮತ್ತು ಸಿದ್ದಾಂತಗಳು ಕಾರ್ಯತತ್ಪರವಾಗಲಿವೆ ಎಂದು ತಿಳಿಸಿದ್ದಾರೆ. ವೈವಿಧ್ಯತೆ, ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿ ಎಂಬ ಮೂರು ತತ್ವಗಳ ಆಧಾರದ ಮೇಲೆ ನಿಂತಿರುವ ಒಳಗೊಳ್ಳುವಿಕೆ ಮತ್ತು ಬಹುಸಂಸ್ಕೃತಿಯ ತತ್ವಕ್ಕೆ ತಲೆಬಾಗದೆ ದೇಶದ ಅಭಿವೃದ್ಧಿ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂದು ಕೋವಿಂದ್ ಅಭಿಪ್ರಾಯಿಸಿದ್ದಾರೆ. ಈ ದೇಶ ಪ್ರತಿಯೊಬ್ಬರಿಗೂ ಸೇರಿದೆ. ಪ್ರತಿ ಸಮೂಹ ಮತ್ತು ಪ್ರತಿ ಸಮುದಾಯ, ಪ್ರತಿ ಪ್ರದೇಶ ಮತ್ತು ಪ್ರತಿ ಗುರುತು. ಈ ದೇಶ ಪ್ರತಿ ಪ್ರಜೆಗೆ ಮತ್ತು ಪ್ರತಿ ವ್ಯಕ್ತಿಗೆ ಸೇರಿದ್ದಾಗಿದೆ. ಭಾರತದ ಬಹುತ್ವ ಅದರ ಅತ್ಯುನ್ನತ ಶಕ್ತಿಯಾಗಿದೆ ಮತ್ತು ಜಗತ್ತಿಗೆ ನೀಡಿದ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ರಾಷ್ಟ್ರಪತಿ ತಿಳಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 21ನೇ ಶತಮಾನದಲ್ಲಿ ಜನಿಸಿರುವವರು ಮೊದಲ ಬಾರಿ ಮತ ಹಾಕಲಿದ್ದಾರೆ. ದಯಮಾಡಿ ನಿಮ್ಮ ಹಕ್ಕನ್ನು ಚಲಾಯಿಸಿ. ನೀವು ಯಾರಿಗೆ ಮತ ಹಾಕುವಿರಿ ಎನ್ನುವುದು ನಿಮಗೆ ಬಿಟ್ಟ ವಿಷಯ. ನಾನು ಮತ ಹಾಕುವಂತೆ ಮನವಿ ಮಾತ್ರ ಮಾಡಬಲ್ಲೆ ಎಂದು ಕೋವಿಂದ್ ಯುವಜನತೆಗೆ ತಿಳಿಸಿದ್ದಾರೆ. ಸಾಮಾನ್ಯ ಜಾತಿ ವಿಭಾಗದ ಆರ್ಥಿಕ ದುರ್ಬಲ ಕುಟುಂಬಗಳಿಗೆ ಶೇ. 10 ಮೀಸಲಾತಿ ಒದಗಿಸಿರುವುದು ಗಾಂಧೀಜಿ ಕನಸಿನ ಭಾರತದತ್ತ ಇಟ್ಟ ಹೆಜ್ಜೆಯಾಗಿದೆ ಎಂದು ಹೇಳಿದ ಕೋವಿಂದ್, ಇದೇ ವೇಳೆ, ಐತಿಹಾಸಿಕವಾಗಿ ಸೌಲಭ್ಯವಂಚಿತವಾಗಿರುವ ಸಮುದಾಯದ ಜನರೊಂದಿಗೆ ನಿರಂತರ ಸಮಾಲೋಚನೆಗಳನ್ನು ನಡೆಸುವ ಅಗತ್ಯದ ಬಗ್ಗೆ ಒತ್ತಿ ಹೇಳಿದ್ದಾರೆ. ಜೊತೆಗಾರಿಕೆ ಎನ್ನುವುದು ಮುಕ್ತ, ಪ್ರಾಮಾಣಿಕ ಮಾತುಕತೆಯಿಂದ ಮತ್ತು ಕಳಂಕವಿಲ್ಲದ ಸಹಾನುಭೂತಿಯಿಂದ ಮಾತ್ರ ಸಾಧ್ಯ. ಇದು ಐತಿಹಾಸಿಕವಾಗಿ ಸೌಲಭ್ಯದಿಂದ ವಂಚಿತರಾಗಿರುವ ಸಮುದಾಯಗಳಿಗೂ ಅನ್ವಯಿಸುತ್ತದೆ. ಈ ಸಮುದಾಯದ ಸಂಕಷ್ಟಗಳನ್ನು ಆಲಿಸುವ ಅಗತ್ಯವಿದೆ ಎಂದು ರಾಷ್ಟ್ರಪತಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News