ಟೋಲ್‍ನಲ್ಲಿ ಸ್ಥಳೀಯರಿಗೆ ವಿನಾಯಿತಿ ಒತ್ತಾಯಿಸಿ ಪ್ರತಿಭನೆ: ಲಾಲಾಜಿ ಮೆಂಡನ್, ಐವನ್ ಡಿಸೋಜ ಭೇಟಿ
ಪಡುಬಿದ್ರಿ, ಜ. 25: ಪಡುಬಿದ್ರಿಯಲ್ಲಿ 19 ದಿನಗಳಿಂದ ಹೆಜಮಾಡಿ ಟೋಲ್‍ನಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಶುಕ್ರವಾರ ಶಾಸಕ ಲಾಲಾಜಿ ಮೆಂಡನ್ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಪಡುಬಿದ್ರಿ, ಪಾದೆಬೆಟ್ಟು ಭಾಗದ ವಾಹನಗಳಿಗೂ ಮುಕ್ತವಾಗಿ ಬಿಡಬೇಕೆಂಬುದನ್ನು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದ್ದೇನೆ. ಮೊನ್ನೆಯ ಸಭೆಯಲ್ಲೂ ಅಧಿಕಾರಿಗಳಿರದೇ ಸಭೆಯೇ ಅಪೂರ್ಣವಾಗಿತ್ತು. ಮುಂದಿನವಾರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇನ್ನೊಂದು ಸಭೆ ಕರೆಯಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಅದರಲ್ಲಿಯೂ ತಮ್ಮ ಸಂಘಟಿತ ಹೋರಾಟಕ್ಕೆ ಸಕಾರಾತ್ಮಕ ಫಲಿತಾಂಶವು ಬಾರದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಡುಬಿದ್ರಿ ಬಂದ್‍ಗೂ ಕರೆ ನೀಡಲಾಗುವುದು ಎಂದೂ ಶಾಸಕರು ಈ ಸಂದರ್ಭದಲ್ಲಿ ಹೇಳಿದರು.
ಸೋಮವಾರ ಮುಖ್ಯಮಂತ್ರಿಗಳೊಂದಿಗೆ ಚರ್ಚೆ: ಐವನ್ ಡಿಸೋಜ ಮಾತನಾಡಿ, ಸೋಮವಾರ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ರೊಡಗೂಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಟೋಲ್ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಹೇಳಿದರಲ್ಲದೆ ಮುಖ್ಯ ಕಾರ್ಯದರ್ಶಿಯವರ ಜತೆಗೂ ಚರ್ಚಿಸುವುದಾಗಿ ಧರಣಿ ನಿರತರಿಗೆ ಭರವಸೆ ನೀಡಿದರು.
ಕೇಂದ್ರ ಹೊಣೆ: ಅವಿಭಜಿತ ದಕ ಜಿಲ್ಲೆಯಲ್ಲಿ ರಸ್ತೆ ಕಾಮಗಾರಿ ಪೂರ್ತಿಗೊಳಿಸದೆ ಅಲ್ಲಲ್ಲಿ ಸುಂಕ ವಸೂಲಾತಿ ಮಾಡುತ್ತಿರುವ ಟೋಲ್ ಪ್ಲಾಝಾಗಳ ದುಂಡಾವರ್ತನೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ. ಸ್ಥಳೀಯ ಸಂಸದರು ಈ ಬಗ್ಗೆ ಮೌನವಾಗಿರುವುದು ತರವಲ್ಲ. ಟೋಲ್ ಸಮಸ್ಯೆಯನ್ನು ಸಂಸದರು ಮುಂದೆ ನಿಂತು ಶೀಘ್ರ ಬಗೆಹರಿಸದಿದ್ದಲ್ಲಿ ಸಂಸದರ ವಿರುದ್ಧವೇ ಹೋರಾಟ ನಡೆಸಬೇಕಾದೀತು ಎಂದು ರಾಜ್ಯ ಸರ್ಕಾರದ ಮುಖ್ಯ ಸಚೇತಕ ಐವನ್ ಡಿಸೋಜಾ ಎಚ್ಚರಸಿದ್ದಾರೆ.
ಎಚ್ಚರಿಕೆ: ಅಮರಣಾಂತ ಉಪವಾಸ, ಮುಖ್ಯಮಂತ್ರಿಗೆ ಕರಿಪತಾಕೆ ನಮಗೆ ನ್ಯಾಯ ಬೇಕು. ಜಿಲ್ಲಾಧಿಕಾರಿ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಮತ್ತಷ್ಟು ನಾವು ಕಾಯಲು ಸಿದ್ಧರಿಲ್ಲ. ವಾರಾಂತ್ಯಕ್ಕೆ ತಮಗೆ ಉತ್ತರವು ಬಾರದಿದ್ದಲ್ಲಿ ಮುಂದಿನ ಭಾನುವಾರದಿಂದ ಮಗದೊಮ್ಮೆ ಆಮರಣಾಂತ ಉಪವಾಸವನ್ನು ಕೈಗೊಳ್ಳುವುದಾಗಿಯೂ, ಫೆಬ್ರವರಿ 3ರಂದು ಜಿಲ್ಲೆಗೆ ಆಗಮಿಸಲಿರುವ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕಪ್ಪು ಬಾವುಟವನ್ನೂ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯು ಪ್ರದರ್ಶಿಸಲಿದೆ ಎಂದು ಕರವೇ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮ್ಮದ್ ಎಚ್ಚರಿಸಿದರು.
ಪಡುಬಿದ್ರಿ ನಾಗರಿಕ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ತಾಲ್ಲೂಕು ಪಂಚಾಯಿತಿ ಸದಸ್ಯರಾದ ದಿನೇಶ್ ಕೋಟ್ಯಾನ್, ನೀತಾ ಗುರುರಾಜ್, ವೈ.ಸುಧೀರ್ ಕುಮಾರ್, ವಿಶ್ವಾಸ್ ವಿ.ಅಮೀನ್, ಲೋಕೇಶ್ ಕಂಚಿನಡ್ಕ, ನವೀನ್ ಎನ್.ಶೆಟ್ಟಿ, ಮಿಥುನ್ ಆರ್. ಹೆಗ್ಡೆ, ಅಬ್ದುಲ್ ಅಝೀಝ್ ಹೆಜಮಾಡಿ, ಎಮ್. ಎಸ್ ಸಯ್ಯದ್ ನಿಜಾಮ್, ಹಮೀದ್ ಹೆಜ್ಮಾಡಿ, ಗಣೇಶ್ ಮೆಂಡನ್, ಆಸಿಫ್ ಆಪತ್ಬಾಂಧವ, ಎಮ್.ಪಿ.ಮೊೈದಿನಬ್ಬ, ಅಬ್ದುಲ್ ಅಜೀಜ್, ಹಸನ್ ಬಾವಾ, ಬುಡಾನ್ ಸಾಹೇಬ್, ಸುಲೈಮಾನ್ ಕಂಚಿನಡ್ಕ, ರಹೀಂ ಕಂಚಿನಡ್ಕ, ನಝೀರ್ ಕಂಚಿನಡ್ಕ, ಯೂಸುಫ್ ಮತ್ತಿತರರು ಉಪಸ್ಥಿತರಿದ್ದರು.