ನೀರವ್ ಮೋದಿಯ 100 ಕೋ. ರೂ. ಬಂಗ್ಲೆ ನೆಲಸಮ

Update: 2019-01-25 18:00 GMT

ರಾಯಗಡ, ಜ. 25: ರಾಜ್ಯ ಪ್ರಾಧಿಕಾರ ಕಾನೂನುಬಾಹಿರ ಎಂದು ಘೋಷಿಸಿದ ಬಳಿಕ ಮಹಾರಾಷ್ಟ್ರದ ಅಲಿಬಾಗ್ ನಲ್ಲಿ ಸಮುದ್ರಕ್ಕೆ ಮುಖ ಮಾಡಿರುವ ನೀರವ್ ಮೋದಿ ಅವರ 100 ಕೋ. ರೂ. ಬಂಗ್ಲೆಯನ್ನು ನೆಲಸಮಗೊಳಿಸಲಾಗಿದೆ. ಈ ಬಂಗ್ಲೆಯನ್ನು ಕಾನೂನು ಬಾಹಿರವಾಗಿ ನಿರ್ಮಿಸಲಾಗಿದೆ. ಕರಾವಳಿ ನಿಯಂತ್ರಣ ವಲಯದ ನಿಯಮಗಳನ್ನು ಹಾಗೂ ರಾಜ್ಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ರಾಯಗಡದ ಜಿಲ್ಲಾಧಿಕಾರಿ ಸೂರ್ಯವಂಶಿ ತಿಳಿಸಿದ್ದಾರೆ. ಈ ಬಗ್ಲೆ ಮುಂಬೈಯಿಂದ 90 ಕಿ.ಮೀ. ದೂರದಲ್ಲಿರುವ ಕಿಹಿಮ್ ಕಡಲ ಕಿನಾರೆಯಲ್ಲಿ ಇದೆ. ಪರಿಸರದ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ 58 ಇತರ ಕಟ್ಟಡಗಳ ಜೊತೆಗೆ ಈ ಬಂಗ್ಲೆಯನ್ನು ಕೂಡ ನೆಲಸಮಗೊಳಿಸಲಾಗಿದೆ. ರಾಯಗಡದ ಕಡಲ ಕಿನಾರೆಯಲ್ಲಿರುವ ಪುಟ್ಟ ಗ್ರಾಮದಲ್ಲಿರುವ ಉಬ್ಬರ ಹಾಗೂ ಇಳಿತದ ವಲಯದಲ್ಲಿ ನಿಯಮ ಉಲ್ಲಂಘಿಸುವ ಕಾನೂನು ಬಾಹಿರ ಬಂಗ್ಲೆಗಳು, ಹೋಟೆಲ್ ಹಾಗೂ ರೆಸಾರ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ 2009ರಲ್ಲಿ ಸರಕಾರೇತರ ಸಂಸ್ಥೆ ಶಂಭುರಾಜೆ ಯುವ ಕ್ರಾಂತಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿತ್ತು. ಈ ದಾವೆಯ ವಿಚಾರಣೆ ನಡೆಸಿದ ಬಾಂಬೆ ಉಚ್ಚ ನ್ಯಾಯಾಲಯ ನೀಡಿದ ಆದೇಶಕ್ಕೆ ಅನುಗುಣವಾಗಿ ನೆಲಸಮ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News