ದೇಶ, ಭಾಷೆಯ ಬೇಧ ಇಲ್ಲದೆ ಎಲ್ಲೆಡೆ ದಲಿತರ ಶೋಷಣೆ: ಉಡುಪಿ ಡಿಸಿ ಪ್ರಿಯಾಂಕ
ಉಡುಪಿ, ಜ.26: ದಲಿತರ ಕಷ್ಟ, ನೋವು, ಶೋಷಣೆಗೆ ದೇಶ, ಭಾಷೆ, ಗಡಿಯ ಅಂತರ ಎಂಬುದಿಲ್ಲ. ಎಲ್ಲ ದಲಿತರು ಅನುಭವಿಸುವ ಕಷ್ಟ ಒಂದೇ ರೂಪದಲ್ಲಿರುತ್ತದೆ. ಇದರ ವಿರುದ್ಧ ಎಲ್ಲ ದಲಿತರು ಒಗ್ಗೂಡಿ ಹೋರಾಟ ಮಾಡಿದರೆ ಉತ್ತಮ ಬದುಕು ಸಾಗಿಸಲು ಸಾಧ್ಯ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮ ಘರ್ಜನೆ) ರಾಜ್ಯ ಸಮಿತಿಯ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮಂಡಿಸಿದ ಸಂವಿಧಾನ ಜಾರಿಯಾಗಿ 70ನೆ ವರ್ಷಾಚರಣೆಯ ಪ್ರಯುಕ್ತ ಶನಿವಾರ ಉಡುಪಿ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾದ ‘ಸಮಬಾಳು ಸಮಪಾಲಿಗಾಗಿ ನಮ್ಮ ಹೋರಾಟ’ ಬಹಿರಂಗ ಸಮಾವೇಶವನ್ನು ಉದ್ಘಾಟಿಸಿ, ಭೀಮ ಘರ್ಜನೆ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ದಲಿತರ ಸಮಸ್ಯೆಯನ್ನು ಒಂದೇ ದಿನದಲ್ಲಿ ಪರಿಹರಿಸಲು ಸಾಧ್ಯವಿಲ್ಲ. ದಲಿತರ ಪರ ಸಾಕಷ್ಟು ಕಾನೂನುಗಳಿದ್ದರೂ ಅದನ್ನು ಅನುಷ್ಠಾನಗೊಳಿಸುವ ಸಂದರ್ಭ ದಲ್ಲಿ ನ್ಯಾಯವು ತಪ್ಪಿಹೋಗುತ್ತಿವೆ. ಇದನ್ನು ನಾವು ಕೂಡ ಅಸಹಾಯಕರಾಗಿ ನೋಡುವ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ದಲಿತರು ನಿರಂತರವಾಗಿ ಅಧಿಕಾರಿ ಗಳ ಸಂಪರ್ಕದಲ್ಲಿ ಇದ್ದು, ನ್ಯಾಯದ ಬಗ್ಗೆ ಪರಿಶೀಲನೆ ಮಾಡುತ್ತಿರಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ನಾಗಣ್ಣ ಕಲ್ಲದೇವನಹಳ್ಳಿ, ದಲಿತ ಚಿಂತಕ ನಾರಾಯಣ ಮಣೂರು, ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ವೇಲಾಯುದನ್, ಸಮಾಜ ಸೇವಕ ಮಾಣಿ ರಮೇಶ್ ತಲ್ಲೂರು ಅವರಿಗೆ ಭೀಮರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ತಲ್ಲೂರು ಗ್ರಾಪಂ ಸದಸ್ಯೆ ದೇವಿ ಶಂಕರ ಅವರನ್ನು ಸನ್ಮಾನಿಸ ಲಾಯಿತು. ಅಧ್ಯಕ್ಷತೆಯನ್ನು ಭೀಮಘರ್ಜನೆ ರಾಜ್ಯ ಸಂಚಾಲಕ ಉದಯ ಕುಮಾರ್ ತಲ್ಲೂರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಲ್ಲೂರು ಗ್ರಾಪಂ ಅಧ್ಯಕ್ಷ ಆನಂದ ಬಿಲ್ಲವ, ದಲಿತ ಚಿಂತಕ ಗ್ಯಾನಪ್ಪ ಬಡಗೇರ, ರಾಜ್ಯ ಸಂಘಟನಾ ಸಂಚಾಲಕ ನಾರಾಯಣ ಸ್ವಾಮಿ, ದಸಂಸ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಮಂಜುಳಮ್ಮ, ದಲಿತ ಕಲಾ ಮಂಡಳಿಯ ರಾಜ್ಯ ಸಂಚಾಲಕ ಡಿಂಗ್ರಿ ನರಸಪ್ಪ, ರಾಜ್ಯ ಕೋಶಾ ಧಿಕಾರಿ ಕೃಷ್ಣಪ್ಪ ಕೋಲಾರ, ರಾಜ್ಯ ಸಂಘಟನಾ ಸಂಚಾಲಕ ಕೆ.ವಿ.ಮುನಿರಾಜು, ದಸಂಸ ಮುಖಂಡ ಶ್ಯಾಮ್‌ರಾಜ್ ಬಿರ್ತಿ, ಸುನೀಲ್ ಖಾರ್ವಿ ಮೊದಲಾದ ವರು ಉಪಸ್ಥಿತರಿದ್ದರು.
ಭೀಮ ಘರ್ಜನೆ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರ್ ಸ್ವಾಗತಿಸಿದರು. ರಾಜ್ಯ ಸಂಘಟನಾ ಸಂಚಾಲಕ ಎಂ.ಈರಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಲತಾ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ಅಜ್ಜರಕಾಡು ಪುರಭವನದ ಎದುರು ನಡೆದ ನೀಲಿ ಭೀಮ ಸೈನ್ಯದ ಪಥ ಸಂಚಲನಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ. ನಿಂಬರ್ಗಿ ಚಾಲನೆ ನೀಡಿದರು. ಪಥಸಂಚಲನವು ಜೋಡುಕಟ್ಟೆ, ಕೋರ್ಟ್ ರಸ್ತೆ, ಕೆ.ಎಂ.ಮಾರ್ಗ ಮೂಲಕ ಬೋರ್ಡ್ ಹೈಸ್ಕೂಲ್ ತಲುಪಿತು.