×
Ad

ಗಣರಾಜ್ಯ ದಿನ ದೇಶದ ಭವಿಷ್ಯಕ್ಕೆ ದಿಕ್ಸೂಚಿಯಾದ ದಿನ -ಡಾ.ಪಿ.ಎಲ್.ಧರ್ಮ

Update: 2019-01-26 18:42 IST

ಮಂಗಳೂರು, ಜ. 26: ಗಣರಾಜ್ಯದ ದಿನ ದೇಶದ ಭವಿಷ್ಯ ಹೇಗಿರಬೇಕು ಎನ್ನುವ ದಿಕ್ಸೂಚಿಯಾದ ದಿನ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ರಾಜ್ಯ ಶಾಸ್ತ್ರ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ಪಿಎಲ್. ಧರ್ಮ ತಿಳಿಸಿದ್ದಾರೆ.

ಅವರು ನಗರದ ಟಾಗೋರ್ ಪಾರ್ಕ್ ಬಳಿ ಇರುವ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದಿಂದ ಹಮ್ಮಿಕೊಂಡ ಗಣರಾಜ್ಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ನಮ್ಮ ದೇಶದಲ್ಲಿ ಪ್ರತಿವರ್ಷ ಸಾಕಷ್ಟು ದಿನಗಳನ್ನು ಆಚರಿಸಲಾಗುತ್ತದೆ. ಆದರೆ ಗಣರಾಜ್ಯ ದಿನ ಆ ಎಲ್ಲಾ ದಿನಗಳಿಂದಲೂ ಮುಖ್ಯವವಾದ ದಿನವಾಗಿದೆ. ದೇಶ ಗಣತಂತ್ರವಾದ ಬಳಿಕ ಏನು ಆಗಿಲ್ಲ ಎನ್ನಲಾಗುವುದು ಸಾಕಷ್ಟು ಗುಣಾತ್ಮಕವಾದ ಬದಲಾವಣೆಗಳು ಆಗಿದೆ ಕೆಲವೊಂದು ನಕಾರಾತ್ಮಕವಾದ ಬದಲಾವಣೆಗಳು ಆಗಿದೆ. ಸಾಮಾನ್ಯ ಕಾರ್ಮಿಕನ ಮಗನು ಉತ್ತಮ ಹುದ್ದೆಗೆ ಏರುವಂತಾಗಿದೆ. ಅದಕ್ಕೆ ನಾನೆ ಸಾಕ್ಷಿಯಾಗಿದ್ದೇನೆ ಎಂದು ಪಿ.ಎಲ್.ಧರ್ಮ ತಿಳಿಸಿದರು.

ದೇಶದಲ್ಲಿ ಮಠ ಮಂದಿರಗಳ ಜೊತೆ ಗುರುತಿಸಿಕೊಳ್ಳುವುದು ಸುಲಭ ಆದರೆ ಇಂದಿನ ದಿನಗಳಲ್ಲಿ ಗಾಂಧಿಯೊಂದಿಗೆ ಅವರ ತತ್ವಗಳೊಂದಿಗೆ ಗುರುತಿಸಿ ಕೊಂಡು ಬದುಕುವುದು ಅಷ್ಟು ಸುಲಭವಲ್ಲ.ಗಾಂಧಿಯನ್ನು ಸೈದಾಂತಿಕವಾಗಿ ಒಪ್ಪಿಕೊಂಡು ಬದುಕುವುದು ಒಂದು ಮಹತ್ವದ ಕೆಲಸ ಎಂದು ಪಿ.ಎಲ್.ಧರ್ಮ ಹೇಳಿದರು.

ಟಾಗೋರ್ ಪಾರ್ಕ್‌ನಲ್ಲಿರುವು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನವನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಸಹಯೋಗದೊಂದಿಗೆ ಸೇರಿಸಿದರೆ ಇನ್ನಷ್ಟು ಉತ್ತಮ ಕೆಲಸ ಮಾಡಬಹುದು ಎಂದು ಧರ್ಮ ಹೇಳಿದರು.

ಗಣರಾಜ್ಯದಿನದ ಅಂಗವಾಗಿ ಬಾವುಟಗುಡ್ಡೆಯಲ್ಲಿ ಬೆಳಗ್ಗೆ ಧ್ವಜಾರೋಹಣವನ್ನು ಗಾಂಧಿ ಪ್ರತಿಷ್ಠಾನದ ಅಧ್ಯಕ್ಷ ಎ.ಸದಾನಂದ ಶೆಟ್ಟಿ ನೆರವೇರಿಸಿ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.

ಮನಪಾ ಮೇಯರ್ ಭಾಸ್ಕರ ಮೊಯ್ಲಿ, ಉಪ ಮೇಯರ್ ಮುಹಮ್ಮದ್ ಕುಂಜತ್ತ ಬೈಲ್‌ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷ ಪ್ರಭಾಕರ ಶ್ರೀಯಾನ್, ಪದಾಧಿಕಾರಿಗಳಾದ ಹೆರಾಲ್ಡ್ ಡಿ ಸೋಜ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಡಾ. ಇಸ್ಮಾಯಿಲ್ ಸ್ವಾಗತಿಸಿದರು. ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News