ಜನ ಸೇವೆಯೇ ನಮ್ಮೆಲ್ಲರ ಗುರಿಯಾಗಲಿ: ತಹಶೀಲ್ದಾರ್ ರಶ್ಮಿ
ಬಂಟ್ವಾಳ, ಜ. 26: ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಬಂಟ್ವಾಳ ಇದರ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ 70ನೇ ಗಣರಾಜ್ಯೋತ್ಸವವನ್ನು ಬಿ.ಸಿ.ರೋಡಿನ ಮಿನಿ ವಿಧಾನ ಸೌಧದ ಮುಂಭಾಗ ಆಚರಿಸಲಾಯಿತು.
ತಹಶೀಲ್ದಾರ್ ರಶ್ಮಿ ಧ್ವಜಾರೋಹಣ ನೆರವೇರಿಸಿದರು. ಇದಕ್ಕೂ ಪೂರ್ವಭಾವಿಯಾಗಿ ಪೊಲೀಸ್, ಗೃಹ ರಕ್ಷಕ ದಳ, ಎನ್‌ಸಿಸಿ, ಭಾರತ ಸೇವಾದಳ, ಸ್ಕೌಟ್ಸ್ ಗೈಡ್ಸ್, ಕಬ್ ಗೈಡ್ಸ್, ಬುಲ್ ಬುಲ್ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಗಣರಾಜ್ಯೋತ್ಸವ ಮೆರವಣಿಗೆ ನಡೆಯಿತು. ಧ್ವಜಾರೋಹಣದ ಬಳಿಕ ವಿವಿಧ ತುಕುಡಿಗಳಿಂದ ಪಥಸಂಚಲನ ನಡೆಯಿತು.
ಅತಿಥಿಗಳು ಗೌರವ ವಂದನೆ ಪಡೆದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರಶ್ಮಿ ಗಣರಾಜ್ಯೋತ್ಸವ ಸಂದೇಶ ನೀಡಿ, ಬಂಟ್ವಾಳದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಒಟ್ಟು ಸೇರಿ ಕೆಲಸ ನಿರ್ವಹಿಸಬೇಕು, ಜನ ಸೇವೆಯೇ ನಮ್ಮೆಲ್ಲರ ಗುರಿಯಾಗಬೇಕು, ಸಂವಿಧಾನದ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಬೋಳಂತಿಮೊಗರು ಶಾಲಾ ಶಿಕ್ಷಕ ವಿಠಲ ನಾಯಕ್ ಪ್ರಧಾನ ಭಾಷಣ ಮಾಡಿ, ತಂತ್ರಜ್ಞಾನ ಮನೆಯೊಳಗಡೆ ಬರುತಿದ್ದಂತೆಯೇ ಮಾನವೀಯ ಸಂಬಂಧ ಗಳು ದೂರ ಆಗಿದೆ. ವಿದ್ಯಾರ್ಥಿಗಳಲ್ಲಿ ತಾಳ್ಮೆ ಕಡಿಮೆಯಾಗುತ್ತಿದ್ದು, ಅಂಕ ಪಡೆಯುವುದೊಂದೆ ಜೀವನದ ಗುರಿಯಾಗಿರಬಾರದು. ಅವರಲ್ಲಿ ರಿಮಾರ್ಕ್ ಬಾರದಂತೆ ನೋಡಿಕೊಳ್ಳುವುದೇ ನಾವು ಮಾಡುವ ದೇಶಸೇವೆ ಎಂದರು.
ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ, ಕೃಷಿಕರಿಗೆ, ಯೋಧರಿಗೆ ಗೌರವ ಕೊಡುವುದನ್ನು ಕಲಿಯಬೇಕಾಗಿದೆ, ರೀಲ್ ಯಾವುದು? ರಿಯಲ್ ಯಾವುದು? ಎನ್ನುವುದನ್ನು ಮಕ್ಕಳಿಸಗೆ ಕಲಿಸಿಕೊಡಬೇಕು. ಚಲನಚಿತ್ರ ನಟರ ಬದಲಿಗೆ ಹುತಾತ್ಮ ಯೋಧರ ಭಾವಚಿತ್ರ ನಮ್ಮ ಓದುವ ಕೊಠಡಿಯಲ್ಲಿರಬೇಕು. ಅಂತರಿಕ್ಷಕ್ಕೆ ಹೋದರೂ ಅಂತರಂಗದಲ್ಲಿ ಬದಲಾವಣೆಯಾಗದಿದ್ದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಶಾಸಕ ರಾಜೇಶ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಶ್ಯಾಮರಾವ್ ಆಚಾರ್ಯ, ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೆರಾ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಎಎಸ್ಪಿ ಸೈದುಲ್ ಅಡಾವತ್, ಪಿಡಬ್ಲ್ಯುಡಿ ಎಂಜಿನಿಯರ್ ಉಮೇಶ್ ಭಟ್, ಸಿಡಿಪಿಒ ಸುಧಾಜೋಷಿ, ಉಪತಹಶೀಲ್ದಾರ್ ರಾಜೇಶ್ ನಾಯ್ಕಾ, ರವಿಶಂಕರ್, ಪ್ರಭಾರ ಉಪತಹಶೀಲ್ದಾರ್ ಸೀತಾರಾಮ, ಗ್ರೆಟ್ಟಾ ಮಸ್ಕರೇನಸ್, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ನವೀನ್ ಬೆಂಜನಪದವು, ದಿವಾಕರ ಮುಗುಳಿಯ ವೇದಿಕೆಯಲ್ಲಿದ್ದರು.
ತಾಪಂ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕತಿಕ ಕಾರ್ಯಕ್ರಮ ನಡೆಯಿತು.