ದೇಶದ ವೈವಿಧ್ಯಕ್ಕೆ ಧಕ್ಕೆ ಬಾರದಿರಲಿ: ಡಾ.ಎಚ್.ಟಿ.ವಾಸಪ್ಪ
ಮಂಗಳೂರು, ಜ.26: ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತ ದೇಶವು ಅನೇಕ ವೈವಿಧ್ಯತೆಗಳನ್ನು ಹೊಂದಿರುವ ದೇಶವಾಗಿದೆ. ಈ ವೈವಿಧ್ಯತೆಗೆ ಯಾವುದೇ ರೀತಿಯಲ್ಲಿ ಧಕ್ಕೆ ಬಾರದಂತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಂಗಳೂರಿನ ಕಾರ್ಪೋರೇಶನ್ ಬ್ಯಾಂಕಿನ ಸಿಬ್ಬಂದಿ ತರಬೇತಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಹಾಯಕ ಮಹಾಪ್ರಬಂಧಕ ಡಾ.ಎಚ್.ಟಿ. ವಾಸಪ್ಪ ಅಭಿಪ್ರಾಯಪಟ್ಟರು.
ಮಂಗಳೂರಿನ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಭಾರತ ಸ್ವಾತಂತ್ರ್ಯ ದೊರಕಿದ ದಿನವಾದ ಆ.15ರಷ್ಟೇ ಪ್ರಾಮುಖ್ಯತೆ ಜನವರಿ 26ಕ್ಕೂ ಇದೆ. ಇದು ಭಾರತ ದೇಶವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೊಳಿಸಿದ ದಿನವಾಗಿದೆ ಎಂದರು.
ದೇಶದಲ್ಲಿ ಬದಲಾವಣೆಯನ್ನು ತರುವ ಸಾಮರ್ಥ್ಯ ಯುವಜನತೆಯಲ್ಲಿದೆ. ಭಾರತ ಪ್ರಪಂಚದಲ್ಲಿಯೇ ಅತೀಹೆಚ್ಚು ಯುವಜನರನ್ನು ಹೊಂದಿರುವ ದೇಶವಾಗಿದ್ದು, ಯುವಕರು ದೇಶ ಕಟ್ಟಲು ಕೈಜೋಡಿಸಬೇಕು ಎಂದು ಕರೆ ನೀಡಿದರು.
ದೇಶ ಕಟ್ಟಲು ಅಥವಾ ಬದಲಾವಣೆ ತರಲು ನಾವು ಇನ್ನೊಬ್ಬರಲ್ಲಿ ಬದಲಾವಣೆ ತರಲು ಪ್ರಯತ್ನಿಸುವುದರೊಂದಿಗೆ ನಮ್ಮಲ್ಲೇ ಬದಲಾವಣೆಗಳನ್ನು ತಂದುಕೊಂಡಾಗ ಮಾತ್ರ ದೇಶ ಕಟ್ಟಲು ಹಾಗೂ ಬದಲಾವಣೆ ತರಲು ಸಾಧ್ಯ ಎಂದು ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಎ.ಸಿದ್ದೀಕ್ ಮಾತನಾಡಿ, ಪ್ರತಿಯೊಬ್ಬ ನಾಗರಿಕನಿಗೂ ಪ್ರಜಾಪ್ರಭುತ್ವದ ಉದ್ದೇಶ, ವೈಶಿಷ್ಟ್ಯಗಳ ಅರಿವು ಇರಬೇಕು. ದೇಶದ ನಾಗರಿಕನಾಗಿ ಕೇವಲ ನಮ್ಮ ಹಕ್ಕುಗಳ ಬಗ್ಗೆ ಮಾತ್ರ ಯೋಚಿಸದೆ ನಾಗರಿಕರಾಗಿ ನಮ್ಮ ಜವಾಬ್ದಾರಿಗಳ ಬಗ್ಗೆ ಯೋಚಿಸಬೇಕು. ಕಾನೂನು ಪಾಲನೆ ಮಾಡಿದಲ್ಲಿ ದೇಶದ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ರಾಮಕೃಷ್ಣ ಬಿ.ಎಂ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರಾಷ್ಟ್ರಮಟ್ಟದ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಮಧುಶ್ರೀ ಜೆ. ಶ್ರೀಯಾನ್ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕಿ ಲತಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಮುಹಮ್ಮದ್ ನಾಝೀರ್ ಹುಸೈನ್ ಸ್ವಾಗತಿಸಿದರು. ಸೌಜನ್ಯಾ ವಂದಿಸಿದರು. ಗೌತಮ್ ಕಾರ್ಯಕ್ರಮ ನಿರೂಪಿಸಿದರು.