ಕಾರ್ಕಳ ಕಜೆ ಜಲಪಾತದ ನೀರಿನಲ್ಲಿ ಮುಳುಗಿ ಓರ್ವ ಮೃತ್ಯು
Update: 2019-01-26 20:34 IST
ಉಡುಪಿ, ಜ.26: ಗೆಳೆಯರೊಂದಿಗೆ ಮಾಳ ಗ್ರಾಮದ ಕಜೆ ಜಲಪಾತಕ್ಕೆ ಪಿಕ್‌ನಿಕ್‌ಗೆ ಬಂದಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಮಂಗಳೂರಿನ ಮಣ್ಣಗುಡ್ಡೆಯ ರಾಜೇಶ್ (40) ಎಂದು ಗುರುತಿಸಲಾಗಿದೆ.
ಇವರು ತನ್ನ 11 ಮಂದಿ ಗೆಳೆಯರೊಂದಿಗೆ ಮಂಗಳೂರಿನಿಂದ ವಾಹನದಲ್ಲಿ ಕಜೆ ಜಲಪಾತಕ್ಕೆ ಬಂದಿದ್ದರು. ಅಲ್ಲಿ ಸ್ನಾನ ಮಾಡಲು ನೀರಿಗೆ ಇಳಿದ ರಾಜೇಶ್ ನೀರಿನಲ್ಲಿ ಮುಳುಗಿದರೆನ್ನಲಾಗಿದೆ. ರಾಜೇಶ್ ಅವರ ಬೊಬ್ಬೆ ಕೇಳಿ ಓಡಿ ಬಂದ ಇತರ ಸ್ನೇಹಿತರು ನೀರಿಗೆ ಹಾರಿ ಮೇಲಕ್ಕೇತ್ತಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎನ್ನಲಾಗಿದ್ದು, ಬಳಿಕ ಸ್ಥಳಕ್ಕೆ ಆಗಮಿಸಿದ ಕಾರ್ಕಳ ಗ್ರಾಮಾಂತರ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ರಾಜೇಶ್ ಅವರ ಮೃತದೇಹವನ್ನು ಮೇಲಕ್ಕೆತ್ತಿದರು.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.