ವಿಟ್ಲ: ಎರಡು ಗುಂಪುಗಳ ನಡುವೆ ಘರ್ಷಣೆ; ಇತ್ತಂಡಗಳ ಮುಖಂಡರು ಪೊಲೀಸ್ ವಶಕ್ಕೆ
ಬಂಟ್ವಾಳ, ಜ. 26: ಎರಡು ಗುಂಪುಗಳ ನಡುವೆ ಘರ್ಷಣೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಇತ್ತಂಡಗಳ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ವಿಟ್ಲದ ಕಡಂಬು ಎಂಬಲ್ಲಿ ನಡೆದಿದೆ.
ಬಜರಂದಳ, ಪಿಎಫ್‍ಐ ಹಾಗೂ ಸ್ಥಳೀಯ ಮುಖಂಡರು ಸೇರಿ ಒಟ್ಟು 8 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಘಟನೆಯ ವಿವರ:
ಶುಕ್ರವಾರ ರಾತ್ರಿ ವಿಟ್ಲ ಸಾಲೆತ್ತೂರು ಮಾರ್ಗವಾಗಿ ವಾಹನವೊಂದರಲ್ಲಿ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿದೆ ಎನ್ನಲಾಗಿದ್ದು, ಈ ಮಾಹಿತಿಯನ್ನರಿತ ಬಜರಂಗದಳದ ಕಾರ್ಯಕರ್ತರು ವಾಹನವನ್ನು ಹಿಂಬಾಳಿಸಿದ್ದಾರೆ. ತದನಂತರ ಬಜರಂಗದ ಕಾರ್ಯಕರ್ತರು ಕಡಂಬು ಎಂಬಲ್ಲಿ ವಾಹನದ ಹುಡುಕಾಟ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ವಾಹನ ಹಾಗೂ ಜಾನುವಾರುಗಳನ್ನು ಪರಿಶೀಲನೆ ನಡೆಸಿ, ವಶಪಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಈ ವೇಳೆ ಸ್ಥಳದಲ್ಲಿ ನೂರಾರು ಕುತೂಹಲಿಗರು ಜಮಾಯಿಸಿದ್ದು, ಈ ಮಧ್ಯೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದ್ದಾರೆ.
ತದನಂತರ ಅಲ್ಲಿಂದ ಕಡಂಬು ಜಂಕ್ಷನ್‍ನಲ್ಲಿ ಸೇರಿದ ಗುಂಪು, ಮತ್ತೆ ಸಂಘಟನೆಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಈ ಸಂದರ್ಭ ಸ್ಥಳಕ್ಕಾಗಮಿಸಿದ ಹೆಚ್ಚುವರಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಸ್ಥಳದಲ್ಲಿದ್ದ ಎರಡು ಗುಂಪಿನ ಮುಖಂಡರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಬಂಟ್ವಾಳ ಎಎಸ್ಪಿ ಸೈದುಲು ಅಡಾವತ್, ವೃತ್ತ ನಿರೀಕ್ಷಕ ನಾಗರಾಜ್, ವಿಟ್ಲ ಉಪನಿರೀಕ್ಷಕ ಯಲ್ಲಪ್ಪ ಸೇರಿ ವಿಟ್ಲ ಪೊಲೀಸರು ಸ್ಥಳಕ್ಕೆ ಧಾವಿಸಿ ಮಾಹಿತಿ ಕಲೆ ಹಾಕಿದ್ದು, ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇಬ್ಬರಿಗೆ ಹಲ್ಲೆ: ಪ್ರತ್ಯೇಕ ಪ್ರಕರಣ ದಾಖಲು
ಈ ವಿಚಾರವಾಗಿ ಕಡಂಬು ಸಮೀಪದ ಬದಿಯಾರು ಎಂಬಲ್ಲಿ ತಂಡವೊಂದು ಯುವಕರಿಬ್ಬರಿಗೆ ಹಲ್ಲೆ ನಡೆಸಿದೆ. ಇವರಿಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳುಗಳ ದೂರಿನ ಹಿನ್ನೆಲೆಯಲ್ಲಿ ಮೊದಲ ಪ್ರಕರಣ ದಾಖಲಾಗಿದ್ದರೆ, ಜಾನುವಾರು ಸಾಗಾಟ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ವಿಚಾರದಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ.
ಸಂಘಟನೆಗಳ ನಡುವೆ ಮಾತುಕತೆ ಘರ್ಷಣೆಗೆ ಕಾರಣವಾಗಿದೆ. ಸಿಬ್ಬಂದಿ ಸಮಯ ಪ್ರಜ್ಞೆ ಘಟನೆ ವಿಸ್ತರಣೆಯಾಗದಂತೆ ಮಾಡಿದೆ. ಘಟನೆಯ ವೀಡಿಯೊ ತುಣುಕುಗಳು ಲಭ್ಯವಾಗಿದ್ದು, ಅದರ ಮೇಲೆ ಕಾರ್ಯಾಚರಣೆ ನಡೆಸಲಾಗುವುದು. ಈಗಾಗಲೇ ಪ್ರತ್ಯೇಕ ಮೂರು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
- ಲಕ್ಷ್ಮೀ ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ