ಕುಂಭಮೇಳದಲ್ಲಿ ಸರಣಿ ಹಂತಕನ ಸೆರೆ

Update: 2019-01-26 16:34 GMT

ಅಲಹಾಬಾದ್, ಜ.26: ಕಳೆದ ಆರು ತಿಂಗಳಲ್ಲಿ 10 ಜನರನ್ನು ಹತ್ಯೆ ಮಾಡಿರುವ, ಇದೀಗ ಸಾಗುತ್ತಿರುವ ಕುಂಭಮೇಳದಲ್ಲಿ ಇಬ್ಬರು ಸಾಧುಗಳನ್ನು ಹತ್ಯೆಗೈಯಲು ಸಿದ್ಧತೆ ನಡೆಸಿದ್ದ 38ರ ಹರೆಯದ ವ್ಯಕ್ತಿಯೊಬ್ಬನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಅಲಹಾಬಾದ್ ಜಿಲ್ಲೆಯ ಬಸೆಹರ ಗ್ರಾಮದ ನಿವಾಸಿ ಕಲುವಾ ಅಲಿಯಾಸ್ ಸಾಯಿ ಬಾಬಾ ಅಲಿಯಾಸ್ ಸುಭಾಸ್ ಎಂದು ಗುರುತಿಸಲಾಗಿದೆ. ನಿದ್ದೆ ಮಾಡುತ್ತಿದ್ದವರ ಮೇಲೆ ಏಕಾಏಕಿ ದಾಳಿ ನಡೆಸಿ ಹರಿತವಾದ ಆಯುಧದಿಂದ ಹತ್ಯೆ ಮಾಡುತ್ತಿದ್ದ ಈತನ ದಾಳಿಗೆ ಸಿಲುಕಿ ಇದುವರೆಗೆ 10 ಮಂದಿ ಮೃತಪಟ್ಟಿದ್ದು ಮೂವರು ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಸಿಟಿವಿ ಫೂಟೇಜ್‌ನ ಸಹಾಯದಿಂದ ಈತನನ್ನು ಕುಂಭಮೇಳದಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಅಲಹಾಬಾದ್‌ನ ವಿಶೇಷ ಪೊಲೀಸ್ ಅಧೀಕ್ಷಕ ನಿತಿನ್ ತಿವಾರಿ ತಿಳಿಸಿದ್ದಾರೆ. 2018ರ ಜುಲೈ 4ರಂದು ಕಿದ್‌ಗಂಜ್‌ನ ದುರ್ಗಾ ಪಾರ್ಕ್‌ನಲ್ಲಿ ನಿದ್ರಿಸುತ್ತಿದ್ದ ಇಬ್ಬರು ಕಾರ್ಮಿಕರನ್ನು ಹತ್ಯೆ ಮಾಡಿದ್ದ. 2018ರ ನವೆಂಬರ್ 27ರಂದು ದಾರಾಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಪರೇಡ್ ಗ್ರೌಂಡ್‌ನಲ್ಲಿ ನಿದ್ರಿಸುತ್ತಿದ್ದ ವ್ಯಕ್ತಿಯನ್ನು , 2018ರ ಡಿಸೆಂಬರ್‌ನಲ್ಲಿ ಕೊತ್ವಾಲಿ ಠಾಣಾ ವ್ಯಾಪ್ತಿಯ ಕೊಥ ಪರ್ಚ ಪ್ರದೇಶದಲ್ಲಿ ನಿದ್ರಿಸುತ್ತಿದ್ದ ಕಾರ್ಮಿಕನನ್ನು ಹತ್ಯೆ ಮಾಡಿದ್ದ. ಈ ವರ್ಷದ ಜನವರಿ 10ರಂದು ಕಿದ್‌ಗಂಜ್‌ನ ತ್ರಿವೇಣಿ ಹೋಟೆಲ್ ಬಳಿ ನಿದ್ರಿಸುತ್ತಿದ್ದ ವ್ಯಕ್ತಿಯ ಗಂಟಲು ಸೀಳಿ ಕೊಲೆ ಮಾಡಿದ್ದ.

ಜನವರಿ 18ರಂದು ದಾರಾಗಂಜ್ ಠಾಣಾ ವ್ಯಾಪ್ತಿಯ ಶಾಸ್ತ್ರಿ ಸೇತುವೆ ಬಳಿ ಫುಟ್‌ಪಾತ್‌ನಲ್ಲಿ ನಿದ್ರಿಸುತ್ತಿದ್ದ ಮೂವರ ಮೇಲೆ ದಾಳಿ ನಡೆಸಿದ್ದ. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು ಓರ್ವ ವ್ಯಕ್ತಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತೀಚೆಗೆ ಕುಂಭಮೇಳ ಆರಂಭಗೊಂಡ ಬಳಿಕ, ಅಖಾಡ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ನಿದ್ರಿಸುತ್ತಿದ್ದ ವ್ಯಕ್ತಿಯನ್ನು ಹತ್ಯೆ ಮಾಡಿದ್ದ. ಈ ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದರು. ಆರೋಪಿ ಪ್ರತೀ ಬಾರಿ ಕೃತ್ಯ ಎಸಗುವಾಗಲೂ ನಿದ್ರಿಸುತ್ತಿದ್ದ ವ್ಯಕ್ತಿಯನ್ನು ಆಯ್ದುಕೊಳ್ಳುತ್ತಿದ್ದ ಮತ್ತು ಬಲಿಪಶುಗಳ ಬಟ್ಟೆಯಿಂದಲೇ ಅವರ ಮುಖವನ್ನು ಮುಚ್ಚಿ ಕೃತ್ಯ ಎಸಗುತ್ತಿದ್ದ. ಈತನ ಬಳಿಯಿದ್ದ ಕೊಡಲಿ, ಎರಡು ಹರಿತವಾದ ಆಯುಧ ಮತ್ತು ಮರದ ಬ್ಯಾಟನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನನ್ನು ಸೆರೆ ಹಿಡಿಯುವ ಪೊಲೀಸ್ ತಂಡಕ್ಕೆ 50 ಸಾವಿರ ಬಹುಮಾನವನ್ನು ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News