ಶ್ರೀನಗರ: ಇಬ್ಬರು ಉಗ್ರರ ಹತ್ಯೆ

Update: 2019-01-26 16:36 GMT

ಶ್ರೀನಗರ, ಜ.26: ಜಮ್ಮು-ಕಾಶ್ಮೀರದ ಶ್ರೀನಗರ ವಲಯದಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಜೈಶೆ ಮುಹಮ್ಮದ್(ಜೆಇಎಂ) ಸಂಘಟನೆಯ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀನಗರದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಭಂಗ ತರುವ ಯೋಜನೆ ರೂಪಿಸಿದ್ದ ಇವರನ್ನು ಶ್ರೀನಗರ ಪಟ್ಟಣದ ಹೊರವಲಯದಲ್ಲಿ ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಎರಡು ಎಕೆ-47 ರೈಫಲ್ ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದ್ದು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

 ಈ ಪ್ರದೇಶದಲ್ಲಿ ಉಗ್ರರ ಚಲನವಲನದ ಬಗ್ಗೆ ದೊರೆತ ಮಾಹಿತಿಯಂತೆ ಸ್ಥಳಕ್ಕೆ ಧಾವಿಸಿದ್ದ ಜಮ್ಮು-ಕಾಶ್ಮೀರ ಪೊಲೀಸ್‌ನ ವಿಶೇಷ ಕಾರ್ಯಪಡೆ(ಎಸ್‌ಒಜಿ) ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ತೀವ್ರಗೊಳಿಸಿದಾಗ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದಾರೆ. ಇದಕ್ಕೆ ಭದ್ರತಾ ಪಡೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News