ಹಣ ವಂಚನೆ ಪ್ರಕರಣ ವಿವಿಐಪಿ ಹೆಲಿಕಾಪ್ಟರ್ ಹಗರಣದ ಆರೋಪಿ ಗೌತಮ್ ಖೈತಾನ್ ಬಂಧನ

Update: 2019-01-26 16:39 GMT

ಹೊಸದಿಲ್ಲಿ, ಜ. 26: ಅಗಸ್ಟಾವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಪ್ರಕರಣದ ಆರೋಪಿಯಾಗಿರುವ ವಕೀಲ ಗೌತಮ್ ಖೈತಾನ್ ಅವರನ್ನು ಕಪ್ಪು ಹಣ ಹೊಂದಿರುವ ಹಾಗೂ ಹಣ ವಂಚನೆಯ ಹೊಸ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಬಂಧಿಸಿದೆ. ಹಣ ವಂಚನೆ ತಡೆ ಕಾಯ್ದೆ ಅಡಿಯಲ್ಲಿ ಇಡಿ ಅಧಿಕಾರಿಗಳು ಶುಕ್ರವಾರ ಖೈತಾನ್ ಅವರನ್ನು ಬಂಧಿಸಿದ್ದಾರೆ. ಅವರನ್ನು ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ದಾಖಲಿಸಿದ ಪ್ರಕರಣದ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಖೈತಾನ್ ವಿರುದ್ಧ ಹಣ ವಂಚನೆ ತಡೆ ಕಾಯ್ದೆ ಅಡಿಯಲ್ಲಿ ಹೊಸ ಕ್ರಿಮಿನಲ್ ಪ್ರಕರಣ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.

ಖೈತಾನ್ ಅವರು ಕಾನೂನು ಬಾಹಿರವಾಗಿ ವಿದೇಶಿ ಬ್ಯಾಂಕ್ ಖಾತೆ ಹೊಂದಿದ್ದಾರೆ ಹಾಗೂ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ಕಪ್ಪು ಹಣ ಹಾಗೂ ಸಾಕಷ್ಟು ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಅವು ತಿಳಿಸಿವೆ. ಅಗಸ್ಟಾ ವೆಸ್ಟ್‌ಲ್ಯಾಂಡ್‌ನೊಂದಿಗಿನ ವಿವಿಐಪಿ ಹೆಲಿಕಾಪ್ಟರ್ ಒಪ್ಪಂದದಲ್ಲಿ ಮಧ್ಯವರ್ತಿಯೆಂದು ಹೇಳಲಾದ ಹಾಗೂ ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತದಿಂದ ದುಬೈಗೆ ಗಡಿಪಾರು ಮಾಡಲಾದ ಕ್ರಿಶ್ಚಿಯನ್ ಮೈಕಲ್‌ರನ್ನು ವಿಚಾರಣೆ ನಡೆಸಿದ ಬಳಿಕ ಖೈತಾನ್‌ರ ಅಕ್ರಮಗಳು ಪತ್ತೆಯಾಯಿತು. ಕಪ್ಪು ಹಣ ತಡೆ ಕಾಯ್ದೆ ಅಡಿಯಲ್ಲಿ ದಾಖಲಿಸಲಾದ ಈ ಹೊಸ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ವಾರ ಆದಾಯ ತೆರಿಗೆ ಇಲಾಖೆ ಖೈತಾನ್ ಅವರ ಮನೆ ಹಾಗೂ ಕಟ್ಟಡಗಳ ತಪಾಸಣೆ ನಡೆಸಿತ್ತು. 3,600 ಕೋ. ರೂ.ನ ಅಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣದ ತನಿಖೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಕೆಲವು ವರ್ಷಗಳ ಹಿಂದೆ ಖೈತಾನ್ ಅವರನ್ನು ಬಂಧಿಸಿತ್ತು. ಎರಡೂ ಸಂಸ್ಥೆಗಳು ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದವು. ಖೈತಾನ್ ಪ್ರಸ್ತುತ ಜಾಮೀನಲ್ಲಿದ್ದಾರೆ ಎಂದು ಅವು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News