ಶೂನ್ಯಕ್ಕೆ ಶೂನ್ಯ ಕೂಡಿಸಿದರೆ ಶೂನ್ಯ: ಸಿಎಂ ಆದಿತ್ಯನಾಥ್

Update: 2019-01-26 16:49 GMT

ನೊಯ್ಡ, ಜ. 26: ‘ಶೂನ್ಯಕ್ಕೆ ಶೂನ್ಯ ಕೂಡಿಸಿದರೆ ಶೂನ್ಯ’ ಆಗುವುದರಿಂದ ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸುವುದರಿಂದ ಮುಂಬರುವ ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಶುಕ್ರವಾರ ಹೇಳಿದ್ದಾರೆ. ಉತ್ತರಪ್ರದೇಶದ ಪೂರ್ವಕ್ಕೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯನ್ನಾಗಿ ಪ್ರಿಯಾಂಕಾ ಗಾಂಧಿ ಅವರನ್ನು ನಿಯೋಜಿಸುವ ಮೂಲಕ ಕಾಂಗ್ರೆಸ್ ತನ್ನ ‘ವಂಶ ರಾಜಕಾರಣ’ದ ಸಂಸ್ಕೃತಿಯನ್ನು ವಿಸ್ತರಿಸಿದೆ ಎಂದು ಅವರು ಹೇಳಿದರು.

ಇಲ್ಲಿ ನೊಯ್ಡ -ಗ್ರೇಟರ್ ನೊಯ್ಡ ಮೆಟ್ರೊ ರೈಲು ಹಾಗೂ ಅರ್ಧಕ್ಕೂ ಅಧಿಕ ಮೂಲಭೂತ ಸೌಕರ್ಯಗಳ ಯೋಜನೆ ಉದ್ಘಾಟಿಸಿದ ಆದಿತ್ಯನಾಥ್, ಎಸ್‌ಪಿ ಹಾಗೂ ಬಿಎಸ್ಪಿಯನ್ನು ತರಾಟೆಗೆ ತೆಗೆದುಕೊಂಡರು. ಈ ಹಿಂದೆ ನೊಯ್ಡ ಹಾಗೂ ಗ್ರೇಟರ್ ನೊಯ್ಡದೊಂದಿಗೆ ಅಪಶಕುನ ಅಂಟಿಕೊಂಡಿತ್ತು. ಯಾರೇ ಮುಖ್ಯಮಂತ್ರಿ ನೊಯ್ಡ ಅಥವಾ ಗ್ರೇಟರ್ ನೊಯ್ಡ ಭೇಟಿ ನೀಡಿದರೆ ಅವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿತ್ತು. ಆದುದರಿಂದ ಈ ವಲಯ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು ಎಂದು ಅವರು ಹೇಳಿದರು. ಮುಖ್ಯಮಂತ್ರಿ ಆದ ಬಳಿಕ ನನ್ನಲ್ಲಿ ಹಲವರು, ‘‘ನೀವು ಪಶ್ಚಿಮ ಉತ್ತರಪ್ರದೇಶದಲ್ಲಿರುವ ಅವಳಿ ನಗರಕ್ಕೆ ಭೇಟಿ ನೀಡುತ್ತೀರಾ’’ ಎಂದು ಪ್ರಶ್ನಿಸುತ್ತಿದ್ದರು. ಅದಕ್ಕೆ ನಾನು, ಯಾಕೆ ಭೇಟಿ ನೀಡಬಾರದು ? ನೊಯ್ಡ ಹಾಗೂ ಗ್ರೇಟರ್ ನೊಯ್ಡ ಕೂಡ ಉತ್ತರಪ್ರದೇಶದ ಭಾಗವಲ್ಲವೇ ಎಂದು ಹೇಳುತ್ತಿದ್ದೆ. ನಾವು ಕುರ್ಚಿ ಅಥವಾ ಅಧಿಕಾರಕ್ಕಾಗಿ ಕೆಲಸ ಮಾಡುತ್ತಿಲ್ಲ. ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿಗೆ ನಾನು ಹಲವು ಬಾರಿ ಭೇಟಿ ನೀಡಿದ್ದೇನೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News