ಉಡುಪಿ: ಮತ್ತೆ ಮೂರು ಮಂಗಗಳ ಕಳೇಬರ ಪತ್ತೆ
ಉಡುಪಿ, ಜ. 26: ಜಿಲ್ಲೆಯಲ್ಲಿ ಶನಿವಾರ ಮತ್ತೆ ಮೂರು ಸತ್ತ ಮಂಗಗಳ ಕಳೇಬರ ಪತ್ತೆಯಾಗಿದೆ. ಈ ಮೂಲಕ ಜ.8ರ ಬಳಿಕ ಜಿಲ್ಲೆಯಲ್ಲಿ ಸತ್ತ ಮಂಗಗಳ ಸಂಖ್ಯೆ 78ಕ್ಕೇರಿದೆ. ಇಂದು ಉಡುಪಿ ತಾಲೂಕಿನ ಕೊಕ್ಕರ್ಣೆ ಹಾಗೂ ಮಂದಾರ್ತಿ ಅಲ್ಲದೇ ಕುಂದಾಪುರ ತಾಲೂಕಿನ ಹಳ್ಳಿಹೊಳೆ ಎಳೆಬೇರು ಎಂಬಲ್ಲಿ ಈ ಕಳೇಬರ ಪತ್ತೆಯಾಗಿದೆ.
ಮೂರು ಕಳೇಬರಗಳು ಸಂಪೂರ್ಣ ಕೊಳೆತು ಹೋಗಿದ್ದು, ಅವುಗಳ ಪೋಸ್ಟ್‌ಮಾರ್ಟಂ ನಡೆಸದೇ ಸುಟ್ಟು ಹಾಕಲಾಗಿದೆ. ಅಟಾಪ್ಸಿ ಮಾಡಲಾದ 28 ಮಂಗಗಳಲ್ಲಿ ಉಳಿದ ಐದರ ವರದಿ ಇಂದೂ ಬಂದಿಲ್ಲ ಎಂದು ಮಂಗನ ಕಾಯಿಲೆ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದರು.
ನಿನ್ನೆ ಮಂಗನ ಕಾಯಿಲೆಯ ಸಂಶಯದ ಮೇಲೆ ಮಣಿಪಾಲ ಪ್ರಯೋಗಾಲಯಕ್ಕೆ ಕಳುಹಿಸಲಾದ ಹಳ್ಳಿಹೊಳೆ ಕಬ್ಬಿನಾಲೆ ಮತ್ತು ಬ್ರಹ್ಮಾವರ ಹೇರೂರಿನ ಇಬ್ಬರು ರೋಗಿಗಳ ರಕ್ತದ ಸ್ಯಾಂಪಲ್‌ನಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾಗಿಲ್ಲ ಎಂದು ಡಾ. ಭಟ್ ತಿಳಿಸಿದರು.
ಇಂದು ಬೆಳ್ವೆ ಅಲ್ಬಾಡಿಯಿಂದ ರೋಗಿಯೊಬ್ಬರು ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದು, ಅವರ ರಕ್ತದ ಸ್ಯಾಂಪಲ್‌ನ್ನು ಮಂಗನ ಕಾಯಿಲೆಗಾಗಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಇದರ ವರದಿ ಇನ್ನಷ್ಟೇ ಬರಬೇಕಾಗಿದೆ.
ಈ ನಡುವೆ ಇಂದು ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಅವರು ಆಶಾ ಕಾರ್ಯಕರ್ತೆಯರ ಸಭೆಯನ್ನು ನಡೆಸಿದ್ದು, ಮಂಗನ ಕಾಯಿಲೆ ಕುರಿತಂತೆ ಮಾಹಿತಿಗಳನ್ನು ನೀಡಿದರು. ಗ್ರಾಮೀಣ ಭಾಗಗಳಲ್ಲಿ ಜ್ವರ ಪೀಡಿತರ ಸರ್ವೆ ನಡೆಸುವಂತೆ, ಮಾಹಿತಿ ಸಿಕ್ಕಿದರೆ ತಕ್ಷಣ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡುವಂತೆ ಅವರಿಗೆ ತಿಳಿಸಾಗಿದೆ ಎಂದು ಡಾ.ಉಡುಪ ಹೇಳಿದರು.
ಕಾಡುಗಳ ಅಕ್ಕಪಕ್ಕದಲ್ಲಿರುವವರು ಸಾಧ್ಯವಿದ್ದಷ್ಟು ಕಾಡಿಗೆ ಹೋಗದಂತೆ ಹಾಗೂ ಅವರ ಸಾಕುಪ್ರಾಣಿಗಳನ್ನು ಕಾಡಿಗೆ ಬಿಡದಂತೆ ತಿಳಿಸಬೇಕೆಂದು ಆಶಾ ಕಾರ್ಯಕರ್ತೆಯರಿಗೆ ತಿಳಿಸಲಾಗಿದೆ ಎಂದರು.