×
Ad

ಸಿದ್ಧಗಂಗಾಶ್ರೀಗಳು ಭಾರತ ರತ್ನ ಪ್ರಶಸ್ತಿ ಮೀರಿ ಬೆಳೆದವರು: ಜಯಮಾಲ

Update: 2019-01-26 22:44 IST

ಉಡುಪಿ, ಜ. 26: ಇತ್ತೀಚೆಗೆ ನಿಧನರಾದ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಸಿಗಬೇಕಿತ್ತೆನ್ನುವುದು ನಮ್ಮ ಆಶಯವಾಗಿತ್ತು. ಬಂದಿದ್ರೆ ನಮಗೆ ತುಂಬಾ ಸಂತೋಷವಾಗುತ್ತಿತ್ತು. ಆದರೆ ಅವರು ಭಾರತ ರತ್ನ ಪ್ರಶಸ್ತಿ ಮೀರಿ ಬೆಳೆದವರು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಅಭಿಪ್ರಾಯ ಪಟ್ಟಿದ್ದಾರೆ.

ಉಡುಪಿ ಬೀಡಿನಗುಡ್ಡೆ ಬಯಲು ರಂಗಮಂದಿರದಲ್ಲಿ ಜಿಲ್ಲಾ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರ ರೊಂದಿಗೆ ಮಾತನಾಡುತಿದ್ದರು.

‘ನೆಪ ಮಾತ್ರಕ್ಕೆ ಅವರಿಗೆ ಭಾರತ ರತ್ನ ಬೇಕು ಅಂದ್ಕೊಂಡ್ವಿ. ಮುಂದಿನ ವರ್ಷವಾದರೂ ಅವರಿಗೆ ಪ್ರಶಸ್ತಿ ಬರಲಿ.’ ಎಂದು ಹಾರೈಸಿದರು. ಕರ್ನಾಟಕದ ಐವರಿಗೆ ಈ ಬಾರಿ ಪದ್ಮ ಪ್ರಶಸ್ತಿ ಸಿಕ್ಕಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಪ್ರಶಸ್ತಿಗಾಗಿ ಸಾಲುಮರದ ತಿಮ್ಮಕ್ಕ ಹಾಗೂ ಪ್ರಭುದೇವ ಅವರನ್ನು ಅಭಿನಂದಿಸು ವುದಾಗಿ ಹೇಳಿದರು.

ಪ್ರಭುದೇವ ಅವರಿಗೆ ತಮಿಳರ ಕೋಟಾದಲ್ಲಿ ಪ್ರಶಸ್ತಿ ಸಿಕ್ಕಿದ್ದಲ್ಲಾ ಎಂದು ಕೇಳಿದಾಗ, ಕಲಾವಿದರಿಗೆ ಭಾಷೆಯ ಗಡಿ ಹಾಕಬೇಡಿ. ಕನ್ನಡ ಚಿತ್ರರಂಗವನ್ನು ಬೆಳೆಸಿದವರು ಪ್ರಭುದೇವ ಕುಟುಂಬದವರು. ಅವರಿಗೆ ಪ್ರಶಸ್ತಿ ಬಂದಿರುವುದು ಖುಷಿಯಾಗಿದೆ ಎಂದರು.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ಸಿಕ್ಕಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದರು. ಅವರಿಗೆ ಪ್ರಶಸ್ತಿ ನೀಡಿದ್ದರಲ್ಲಿ ಯಾವುದೇ ರಾಜಕೀಯ ಇಲ್ಲ. ಅಂಥ ಒಳ್ಳೆಯ ಕೆಲಸವನ್ನು ಅವರು ಮಾಡಿದ್ದಾರೆ. ಕಾಂಗ್ರೆಸ್ಸಿಗರನ್ನು ಯಾವ ಬಿಜೆಪಿಯವರಿಗೂ ಏನೂ ಮಾಡಕ್ಕಾಗಲ್ಲ ಎಂದರು.

ಗಣೇಶ ಸಿಗ್ತಾರೆ: ಈಗ ನಾಪತ್ತೆಯಾಗಿರುವ ಕಾಂಗ್ರೆಸ್ ಶಾಸಕ ಗಣೇಶ್ ಅವರು ಸಿಕ್ಕೇ ಸಿಗ್ತಾರೆ.ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲ್ಸ ಮಾಡ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಪ್ರಶ್ನೆಗೆ ತಡೆ ಹಾಕಿದ ಜಯಮಾಲ, ನಿಮಗೆ ಆತುರ ಅಷ್ಟೇ. ಸಿಕ್ತಾರೆ ಬಿಡಿ ಎಂದು ಪ್ರಶ್ನೆ ತೇಲಿಸಿದರು.

ಬರ ಪ್ರವಾಸಕ್ಕೆ ತೆರಳಿದ ಸಚಿವ ಕೃಷ್ಣ ಬೈರೇಗೌಡ, ಅಲ್ಲಿ ಮಜಾ ಮಾಡ್ತಿದ್ದಾರೆ ಎಂಬ ವರದಿಯ ಕುರಿತು ಕೇಳಿದಾಗ, ಬರ ಪ್ರವಾಸಕ್ಕೆ ಹೋದಾಗ ಅರಣ್ಯ ನೋಡ್ಕಂಡು ಬಂದಿರ್ತಾರೆ ಅಷ್ಟೆ ಎಂದರು. ಬರ ಪರಿಹಾರಕ್ಕೆ ಮುಂದಾಗಲು ವಿಪಕ್ಷ ನಮಗೆ ಹೇಳಿಕೊಡಬೇಕಿಲ್ಲ. ನಮಗೂ ಜವಾಬ್ದಾರಿ ಇದೆ. ನಾವೇ ಎಲ್ಲವನ್ನು ಮಾಡ್ತೇವೆ ಎಂದರಲ್ಲದೇ, ಯಡಿಯೂರಪ್ಪ ಕಾಟಾಚಾರದ ಬರ ಪ್ರವಾಸ ಮಾಡುತಿದ್ದಾರೆ ಎಂಬ ವರದಿ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿ, ಅವರ ಬಗ್ಗೆ ನನಗಿಂತ ನಿಮಗೇ ಚೆನ್ನಾಗಿ ಗೊತ್ತಿದೆ ಎಂದರು.

ಮಗನ ಸಿನಿಮಾ ನೋಡ್ಬಾರ್ದಾ?: ಬರ ಪ್ರವಾಸಕ್ಕೆ ತೆರಳದೇ ಮಗನ ಸಿನಿಮಾ ನೋಡುವುದರಲ್ಲಿ ಮುಖ್ಯಮಂತ್ರಿ ಬ್ಯುಸಿ ಆಗಿದ್ದಾರೆಂಬ ಆರೋಪದ ಕುರಿತು ಕೇಳಿದಾಗ, ಅವರ ಮಗ ಮಾಡಿದ ಒಂದು ಸಿನಿಮಾವನ್ನು ಅಪ್ಪ ನೋಡ್ಬಾರ್ದಾ ಎಂದು ಮರು ಪ್ರಶ್ನಿಸಿದರು.

ಹಾಗಾದರೆ ಮಕ್ಕಳ ಬೆಳವಣಿಗೆ ಬಗ್ಗೆ ಅಪ್ಪಂದಿರು ಗಮನ ನೀಡುವುದಲ್ವಾ. ಅವರ ಮಗ ಮಾಡಿದ ಒಂದು ಸಿನಿಮಾ ನೋಡೋಡೂ ಟೈಂ ಲೆಕ್ಕ ಹಾಕ್ಬೇಡಿ. ಎಲ್ಲಕ್ಕೂ-ಊಟ, ನಿದ್ದೆ, ಕೆಲಸ- ಸಮಯ ಇರುತ್ತೆ. ಬರ ಅಂತೇಳಿ ಊಟ ಮಾಡದೇ ಇರಕ್ಕಾಗುತ್ತಾ ಎಂದು ಜಯಮಾಲಾ ಮರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News