×
Ad

ಕಾಂಗ್ರೆಸ್ ಪಾದಯಾತ್ರೆಯಿಂದ ಬಿಜೆಪಿಯಲ್ಲಿ ನಡುಕ: ಸಚಿವ ಖಾದರ್

Update: 2019-01-28 20:09 IST

ಮಂಗಳೂರು, ಜ.28: ದ.ಕ. ಜಿಲ್ಲಾ ಕಾಂಗ್ರೆಸ್ ನೆಲ್ಯಾಡಿಯಿಂದ ಬಿ.ಸಿ.ರೋಡ್‌ವರೆಗೆ ಸತತ ಮೂರು ದಿನಗಳ ಕಾಲ ಪಾದಯಾತ್ರೆ ನಡೆಸಲಾಗಿತ್ತು. ಈಗ ತಲಪಾಡಿಯಿಂದ ಪಂಪ್‌ವೆಲ್‌ವರೆಗೆ ನಡೆಸಿದ ಪಾದಯಾತ್ರೆಗಳಿಂದ ಬಿಜೆಪಿ ವಲಯದಲ್ಲಿ ನಡುಕ ಹುಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ತಲಪಾಡಿಯಲ್ಲಿ ಚಾಲನೆ ನೀಡಿದ ಕಾಂಗ್ರೆಸ್ ಪಾದಯಾತ್ರೆ ನಗರದ ಪಂಪ್‌ವೆಲ್‌ನ ಇಂದಿರಾ ಕ್ಯಾಂಟೀನ್ ಬಳಿ ಸಮಾರೋಪಗೊಂಡಿತು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಚಿವರು, ಜಿಲ್ಲೆಯ ತಾಲೂಕೊಂದರಲ್ಲಿ ಉಜ್ವಲ ಯೋಜನೆಗೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ಕೇಂದ್ರದ ಸಚಿವರನ್ನು ಕರೆಸಿರುವುದು ದ.ಕ. ಜಿಲ್ಲೆಯ ಸಂಸದರಿಗೆ ಭಯ ಶುರುವಾಗಿರುವುದು ಕಂಡುಬರುತ್ತಿದೆ ಎಂದು ಹೇಳಿದರು.

ಉಜ್ವಲ ಯೋಜನೆ ವಿಫಲ: ರಾಜ್ಯದಲ್ಲಿ ಇನ್ನು 25 ಲಕ್ಷ ಕುಟುಂಬಕ್ಕೆ ಅನಿಲ ಸಂಪರ್ಕ ಕಲ್ಪಿಸಿಲ್ಲ. ಇದರಲ್ಲಿ ಕೇಂದ್ರ ಸರಕಾರ 7ರಿಂದ 8 ಲಕ್ಷ ಕುಟುಂಬಕ್ಕೆ ಗ್ಯಾಸ್ ಸಂಪರ್ಕ ಕಲ್ಪಿಸಿದೆ. ಆದರೆ ರಾಜ್ಯ ಸರಕಾರ ಈಗಾಗಲೇ ‘ಮುಖ್ಯಮಂತ್ರಿ ಅನಿಲ ಯೋಜನೆ’ಯಡಿ 16 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ರಾಜ್ಯ ಸರಕಾರದ ಸಾಧನೆಯನ್ನು ಕೇಂದ್ರ ತನ್ನದೆಂದು ಹೇಳಿಕೊಳ್ಳುತ್ತಾ ಬೀಗುತ್ತಿದ್ದು, ಕೇಂದ್ರ ಸರಕಾರದ ಉಜ್ವಲ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದು ಸಚಿವರು ಪುನರುಚ್ಛರಿಸಿದರು.

ಬಿಜೆಪಿಯಿಂದ ಅಧಿಕಾರಿ ವರ್ಗದ ದುರ್ಬಳಕೆ: ಸರಕಾರದ ಕರ್ತವ್ಯ ನಿರ್ವಹಿಸಬೇಕಾಗಿದ್ದ ಅಧಿಕಾರಿ ವರ್ಗವನ್ನು ಬಿಜೆಪಿ ಸಂಸದರು ಬಿಜೆಪಿಯ ಕಾರ್ಯ ಕರ್ತರಂತೆ ದುಡಿಸಿಕೊಳ್ಳುವ ಮೂಲಕ ಬಿಜೆಪಿಯು ಅಧಿಕಾರಿ ವರ್ಗವನ್ನು ದುರ್ಬಳಕೆ ಮಾಡಿಕೊಂಡಿದೆ. ಅಧಿಕಾರಿಗಳನ್ನು ರಾಜಕೀಯಕ್ಕೆ ಬಳಸಿ ಕೊಳ್ಳುತ್ತಿರುವುದು ಅತ್ಯಂತ ಹೇಯಕರವಾಗಿದೆ. ಗ್ಯಾಸ್ ಡೀಲರ್‌ಗಳಿಂದ ಕಾರ್ಯಕ್ರಮಕ್ಕೆಂದು ಊಟವನ್ನು ತರಿಸಿಕೊಳ್ಳಲಾಗಿತ್ತು. ಗ್ಯಾಸ್ ಡೀಲರ್‌ಗಳು ಫ್ಲೆಕ್ಸ್‌ಗಳನ್ನು ಹಾಕಿಸುವಂತೆ ಮಾಡುವಲ್ಲಿ ಬಿಜೆಪಿ ಮುಂದಾಗಿರುವುದು ಅಭಿವೃದ್ಧಿಕರ ಬೆಳವಣಿಗೆಯಲ್ಲ. ಇದರ ಬಗ್ಗೆ ಜಿಲ್ಲೆಯ ಜನಸಾಮಾನ್ಯರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಸಚಿವರು ತಿಳಿಸಿದರು.

ನಗರದ ನಂತೂರು ಸರ್ಕಲ್, ಪಂಪ್‌ವೆಲ್, ತೊಕ್ಕೊಟ್ಟುಗಳಲ್ಲಿ ಗಂಟೆಗಟ್ಟಲೇ ಸಂಚಾರ ಸಮಸ್ಯೆ ಉದ್ಭವಿಸುತ್ತಿದೆ. ಇದರ ದುಷ್ಪರಿಣಾಮ ನಗರದ ಜನತೆಗೆ ತಟ್ಟುತ್ತಿದೆ. ಇದು ಲೋಕಸಭಾ ಸಂದಸ ನಳಿನ್‌ಕುಮಾರ್ ಕಟೀಲ್ ಅವರ ಸಾಧನೆಯಾಗಿದೆ. ಡಿಸೆಂಬರ್, ಫೆಬ್ರವರಿಯಲ್ಲಿ ಫ್ಲೈ ಓವರ್ ಬ್ರಿಡ್ಜ್ ಲೋಕಾರ್ಪಣೆಗೊಳ್ಳುತ್ತದೆ ಎಂದು ಹೇಳುತ್ತಾ ಸುಳ್ಳು ಭರವಸೆಗಳನ್ನು ಜತೆಗೆ ನೀಡುತ್ತಿದ್ದಾರೆ. ಇದು ಜಿಲ್ಲೆಗೆ ತುಂಬಲಾಗದ ನಷ್ಟವಾಗಿದೆ ಎಂದು ಸಂಸದರನ್ನು ಟೀಕಿಸಿದರು.

ಮಂಗಳೂರು ಆಧುನಿಕದ ವೇಗದಲ್ಲಿ ಬೆಳೆಯಲು ಸುಶಿಕ್ಷಿತ ಸಂಚಾರ ವ್ಯವಸ್ಥೆಯು ಅತ್ಯಗತ್ಯವಾಗಿದೆ. ಮಹಾಂಕಾಳಿಪಡ್ಪುವಿನಲ್ಲಿ ಹೆಚ್ಚಿನ ಸಂಚಾರ ಸಮಸ್ಯೆ ಉಂಟಾಗುತ್ತಿತ್ತು. ಮಂಗಳೂರು ಮಹಾನಗರ ಪಾಲಿಕೆಯಿಂದ ಕೋಟ್ಯಂತರ ರೂ. ಅನುದಾನವನ್ನು ನೀಡಿ ಮೇಲ್ಸೆತುವೆ ನಿರ್ಮಿಸಲಾಗಿದೆ. ಮಂಗಳೂರಿಗೆ ಜನರು ಬಂದರೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕೊಡುಗೆಯಾಗಲಿದೆ. ರಸ್ತೆ, ಸಂಚಾರ ವ್ಯವಸ್ಥೆ ಅಭಿವೃದ್ಧಿಗೆ ಪೂರಕವಾಗಿರುತ್ತದೆ ಎಂದರು.

ಚುನಾವಣೆಗೆ ಅಣಿಯಾಗಿ: ಸಾರ್ವತ್ರಿಕ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿದೆ. ಇನ್ನು ಕೇವಲ ತಿಂಗಳಲ್ಲಿ ಚುನಾವಣೆ ನಡೆಯಲಿದೆ ಎನ್ನುವ ರೀತಿಯಲ್ಲಿ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು. ಪ್ರತಿ ಬೂತ್‌ಮಟ್ಟದಲ್ಲೂ ಚುನಾವಣಾ ಗುರುತಿನ ಚೀಟಿಗಳನ್ನು ಮಾಡಿಸುವುದನ್ನು ಸಮರೋಪಾದಿಯಲ್ಲಿ ನಡೆಸಬೇಕು. ಕೇಂದ್ರದ ಜನವಿರೋಧಿ ನೀತಿಗಳನ್ನು ಜನಸಾಮಾನ್ಯರ ಮುಂದಿಡಬೇಕು ಎಂದು ಕಾರ್ಯಕರ್ತರಲ್ಲಿ ಸಚಿವರು ಮನವಿ ಮಾಡಿದರು.

ಕಾಂಗ್ರೆಸ್, ಬಿಜೆಪಿಯನ್ನು ಹೊರತುಪಡಿಸಿ ಕೆಲವು ಸಣ್ಣಪುಟ್ಟ ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡುತ್ತಿದ್ದು, ಕೆಲವೊಮ್ಮೆ ಅಬ್ಬರಿಸುತ್ತವೆ. ಅವುಗಳಿಂದ ಪಕ್ಷಕ್ಕೆ ಯಾವುದೇ ಹಾನಿಯಿಲ್ಲ. ಅಬ್ಬರಿಸುವ ಸಣ್ಣ ಪಕ್ಷಗಳು ಚಿಲ್ಲರೆ ನಾಣ್ಯದಂತೆ ಹೆಚ್ಚು ಶಬ್ದವನ್ನು ಮಾಡುತ್ತವೆ. ಆದರೆ ಕಾಂಗ್ರೆಸ್ ಪಕ್ಷ ಸದೃಢವಾಗಿದ್ದು, ನೋಟಿನಂತೆ ಸಂಯಮ ಹೊಂದಿದೆ ಎಂದು ತಿಳಿಸಿದರು.

ಬಿಜೆಪಿ ಅಂದರೆ ಭಾರತ್ ಜೂಟ್ ಪಾರ್ಟಿ: ರೈ ಬಿಜೆಪಿಯು ಯಾವಾಗಲೂ ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿದೆ. ಹಾಗಾಗಿಯೇ ಕೇಂದ್ರ ಸಚಿವ ಗಡ್ಕರಿಯವರಿಗೆ ಇತ್ತೀಚೆಗೆ ಬಿಜೆಪಿ ಜನಪ್ರತಿನಿಧಿಗಳನ್ನುದ್ದೇಶಿಸಿ ‘ಸುಳ್ಳು ಭರವಸೆ ನೀಡಬೇಕು. ಬಳಿಕ ಅವುಗಳನ್ನು ಸರಿಪಡಿಸಲು ತಡಕಾಡಬೇಕಾಗುತ್ತದೆ’ ಎಂದು ಸೂಚಿಸಿದ್ದರು. ಆದರೆ ಇದನ್ನು ಪಾಲಿಸದ ಜಿಲ್ಲೆಯ ಬಿಜೆಪಿಯವರು ಮತ್ತೆ ಸುಳ್ಳುಗಳ ಸರಮಾಲೆ ಹೆಣೆಯುತ್ತಿದ್ದಾರೆ. ಬಿಜೆಪಿ ಎಂದರೆ ಭಾರತ್ ಜೂಟ್ ಪಾರ್ಟಿಯಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ವ್ಯಂಗ್ಯವಾಡಿದರು.

ಬಿಜೆಪಿಯಿಂದ ಯಕ್ಷಗಾನದಲ್ಲಿ ರಾಜಕೀಯ: ಜಿಲ್ಲೆಯ ಜನರನ್ನು ಸದಾ ಒಂದಿಲ್ಲೊಂದು ವಿಷಯದಲ್ಲಿ ಭಾವನಾತ್ಮಕವಾಗಿ ಹಿಡಿದಿಟ್ಟುಕೊಳ್ಳಲು ಕೋಮು ಭಾವನೆ ಕೆರಳಿಸುವ ಹೇಳಿಕೆ ನೀಡುವ ಬಿಜೆಪಿ ಇತ್ತೀಚೆಗೆ ಯಕ್ಷಗಾನದಲ್ಲೂ ರಾಜಕೀಯದ ಬೇಳೆ ಬೇಯಿಸಿಕೊಳ್ಳುತ್ತಿದೆ. ಯಕ್ಷಗಾನ ಪವಿತ್ರವಾಗಿದ್ದು, ಅದರ ಘನತೆ, ಗೌರವವನ್ನು ಹರಾಜು ಹಾಕುವ ಮೂಲಕ ಯಕ್ಷಗಾನಕ್ಕೆ ಅನಮಾನ ಮಾಡುವ ಪ್ರಸಂಗಗಳು ಹೆಚ್ಚುತ್ತಿವೆ. ಬಿಜೆಪಿಯು ಯು-ಟರ್ನ್ ಸರಕಾರವಾಗಿದೆ ಎಂದು ಖಂಡಿಸಿದರು.

ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರೀಶ್‌ಕುಮಾರ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಶಕುಂತಲಾ ಶೆಟ್ಟಿ, ಸಂತೋಷ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ಧನಂಜಯ, ತಾರಾನಾಥ ಶೆಟ್ಟಿ, ಮಮತಾ ಗಟ್ಟಿ, ಸಾಹುಲ್ ಹಮೀದ್, ಶಾಲೆಟ್ ಪಿಂಟೋ, ಅಬ್ಬಾಸ್ ಸಾಲಿ, ಗಣೇಶ್ ಪೂಜಾರಿ, ದೇವಿ ಕುಂದರ್, ಪ್ರಶಾಂತ್, ದೇವರಾಜ ಕರ್ಕೇರಾ, ಕೆಪಿಸಿಸಿಯ ಸಲೀಂ, ಕಣಚೂರು ಮೋನು, ಈಶ್ವರ್ ಉಳ್ಳಾಲ್, ಇಬ್ರಾಹೀಂ ಕೋಡಿಜಾಲ್, ಡಾ. ರಘು ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಶ್ವಾಸ್‌ ಕುಮಾರ್ ದಾಸ್ ಸ್ವಾಗತಿಸಿದರು. ರಝಾಕ್ ಕುಕ್ಕಾಜೆ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News