×
Ad

ಬೆಳಕು ಮೀನುಗಾರಿಕೆಯಿಂದ ಮರಳಲು ಅವಕಾಶ ನೀಡದ ಸಾಂಪ್ರದಾಯಿಕ ಮೀನುಗಾರರು

Update: 2019-01-28 20:12 IST

ಮಂಗಳೂರು, ಜ. 28: ಬೆಳಕು ಮೀನುಗಾರಿಕೆ ನಡೆಸಿ ಮಂಗಳೂರು ಬಂದರು ದಕ್ಕೆ ಸೇರಲು ಮುಂದಾದ ಪರ್ಸಿನ್ ಮತ್ತು ಬುಲ್‌ಟ್ರಾಲ್ ಮೀನುಗಾರರನ್ನು ಸಾಂಪ್ರದಾಯಿಕ ಮೀನುಗಾರರು ಸೋಮವಾರ ಅವಕಾಶ ಕಲ್ಪಿಸದ ಕಾರಣ ದಕ್ಕೆಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ಕಂಡು ಬಂತು. ಈ ಮಧ್ಯೆ ಪೊಲೀಸ್ ವಾಹನ ಬಂದರು ದಕ್ಕೆಯಲ್ಲಿ ಬೀಡುಬಿಟ್ಟಿದ್ದು, ಅಹಿತಕರ ಘಟನೆ ನಡೆಯದಂತೆ ಮುಂಜಾಗರೂಕತೆ ವಹಿಸಿದೆ.

ಸಮುದ್ರದ ತೀರದಿಂದ 12 ನಾಟಿಕಲ್‌ ನಾಚೆಗೆ ಸಮುದ್ರೊಳಗೆ ಮತ್ತು ಹೊರಗೆ ಲೈಟ್ ಫಿಶಿಂಗ್ (ಬೆಳಕು ಹಾಯಿಸಿ)ಮೀನುಗಾರಿಕೆಯನ್ನು ರಾಜ್ಯ ಸರಕಾರ ಈ ಹಿಂದೆ ನಿಷೇಧಿಸಿತ್ತು. ಇದರ ವಿರುದ್ಧ ಪರ್ಸಿನ್ ಮೀನುಗಾರರ ಸಂಘಟನೆಯು ಹೈಕೋರ್ಟ್ ಮೆಟ್ಟಲೇರಿತ್ತು. ಅದರಂತೆ ಹೈಕೋರ್ಟ್ ಜ.21ಕ್ಕೆ ನೀಡಿದ ಆದೇಶದಲ್ಲಿ 12 ನಾಟಿಕಲ್ ಮೈಲಿನಾಚೆ ಲೈಟ್ ಫಿಶಿಂಗ್‌ಗೆ ಅನುಮತಿ ನೀಡಿತ್ತು. ಈ ಆದೇಶದ ಪ್ರತಿಯನ್ನು ಅಖಿಲ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘವು ದ.ಕ.ಜಿಲ್ಲಾ ಮೀನುಗಾರಿಕಾ ಉಪನಿರ್ದೇಶಕರಿಗೆ ನೀಡಿ ಲೈಟ್ ಫಿಶಿಂಗ್ ಮಾಡಲು ನಿರ್ಧರಿಸಿತ್ತು. ಇದನ್ನು ತಿಳಿದ ಸಾಂಪ್ರದಾಯಿಕ ಮೀನುಗಾರರು, ವ್ಯಾಪಾರಸ್ಥರು ಶನಿವಾರ ಬಂದರು ದಕ್ಕೆಯಲ್ಲಿರುವ ಮೀನುಗಾರಿಕಾ ಉಪನಿರ್ದೇಶಕರ ಕಚೇರಿಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಯಾವ ಕಾರಣಕ್ಕೂ ಲೈಟ್ ಫಿಶಿಂಗ್ ಮಾಡಬಾರದು ಎಂದು ಆಗ್ರಹಿಸಿದ್ದರು.

ಇದರ ಮಧ್ಯೆ ಪರ್ಸಿನ್ ಮತ್ತು ಬುಲ್‌ಟ್ರಾಲ್ ಮೀನುಗಾರರು ಬೆಳಕು ಫಿಶಿಂಗ್‌ಗೆ ತೆರಳಿತ್ತು. ಈ ಮೀನುಗಾರರ ಪೈಕಿ ಸುಮಾರು 7 ಬೋಟ್‌ಗಳು ಸೋಮವಾರ ಬಂದರು ದಕ್ಕೆ ಸೇರುವ ಮುನ್ಸೂಚನೆ ಪಡೆದ ಸಾಂಪ್ರದಾಯಿಕ ಮೀನುಗಾರರು, ವ್ಯಾಪಾರಸ್ಥರು ದಕ್ಕೆಯಲ್ಲಿ ಜಮಾಯಿಸಿದರು. ಅಲ್ಲದೆ ದಡದ ಸಮೀಪದ ಬಂದ 2 ಬೋಟನ್ನು ವಾಪಸ್ ಕಳುಹಿಸಿದರು ಎನ್ನಲಾಗಿದೆ. ಹಾಗಾಗಿ ಬೆಳಕು ಮೀನುಗಾರಿಕೆ ನಡೆಸಿದ್ದ ಮೀನುಗಾರರು ಕಡಲಲ್ಲೇ ಬಾಕಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ದಕ್ಕೆಯಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸರು ಬೀಡುಬಿಟ್ಟಿದ್ದಾರೆ.

ಟ್ರಾಲ್‌ಬೋಟ್ ಮೀನುಗಾರರ ಸಂಘದ ಸಭೆ: ಸರಕಾರದ ದ್ವಂದ ನಿಲುವಿನಿಂದ ಆಕ್ರೋಶಗೊಂಡಿರುವ ಟ್ರಾಲ್‌ಬೋಟ್ ಮೀನುಗಾರರು ಸಂಘದ ಪದಾಧಿಕಾರಿಗಳು ಸೋಮವಾರ ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸಿದ್ದಾರಲ್ಲದೆ, ಕಾನೂನು ಹೋರಾಟ ಮಾಡಲು ತಂಡವೊಂದನ್ನು ರಚಿಸಿದ್ದಾರೆ. ಅಲ್ಲದೆ, ಬುಧವಾರ ಸಂಘದ ಮಹಾಸಭೆಯನ್ನು ಕರೆದು ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನಿತಿನ್ ಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News