ಗಿಲ್‌ನೆಟ್ ಮೀನುಗಾರರ ಸಂಘದಿಂದ ದ.ಕ. ಜಿಲ್ಲಾಡಳಿತಕ್ಕೆ ಮನವಿ
ಮಂಗಳೂರು, ಜ.28: ಬಂದರು ದಕ್ಕೆಯಲ್ಲಿ ಪರ್ಸಿನ್ ಮೀನುಗಾರರಿಂದ ಲೈಟ್‌ಫಿಶಿಂಗ್ ಮತ್ತು ಟ್ರಾಲ್‌ಬೋಟ್ ಮೀನುಗಾರರಿಂದ ಬುಲ್‌ಟ್ರಾಲ್ ಮಾಡುವುದನ್ನು ವಿರೋಧಿಸಿ ಸೋಮವಾದ ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘದ ನಿಯೋಗವು ದ.ಕ.ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಯಾವ ಕಾರಣಕ್ಕೂ ಲೈಟ್‌ಫಿಶಿಂಗ್ ಮತ್ತು ಬುಲ್‌ಟ್ರಾಲ್ ಮೀನುಗಾರಿಕೆಗೆ ಅವಕಾಶ ನೀಡಬಾರದು. ಈ ಮೀನುಗಾರರು 2016ರಲ್ಲಿ ರಾಜ್ಯ ಸರಕಾರ ಹೊರಡಿಸಿದ ಸುತ್ತೋಲೆಯನ್ನು ಮರೆಮಾಚಿ 2018ರ ಸುತ್ತೋಲೆಯನ್ನು ಹೈಕೋರ್ಟ್‌ಗೆ ನೀಡಿ ವಾಸ್ತವಾಂಶ ಮರೆಮಾಚಿಸಿದ್ದಾರೆ. ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಕೂಡ ಪ್ರಕರಣ ನಿಭಾಯಿಸಲು ವಿಫಲರಾಗಿದ್ದಾರೆ. ಲೈಟ್‌ಫಿಶಿಂಗ್ ಮಾಡಿದರೆ ಮೀನಿನ ಸಂತತಿ ನಾಶವಾಗಲಿದೆ. ಅಲ್ಲದೆ ಗಿಲ್‌ನೆಟ್ ಮತ್ತು ನಾಡದೋಣಿ ಮೀನುಗಾರಿಕೆಗೆ ಹೊಡೆತವೂ ಬೀಳಲಿದೆ. ಸಾವಿರಾರು ಕುಟುಂಬ ಬೀದಿಪಾಲಾಗುವ ಅಪಾಯವಿದೆ. ಬಂದರು ದಕ್ಕೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಂಘದ ಅಧ್ಯಕ್ಷ ಅಲಿಹಸನ್ ಆಗ್ರಹಿಸಿದ್ದಾರೆ.
ಈ ಸಂದರ್ಭ ಸಂಘದ ಮುಖಂಡರಾದ ಸತೀಶ್ ಕೋಟ್ಯಾನ್, ಬಿ.ಎ.ಬಶೀರ್, ಹೈದರ್, ರಿಯಾಝ್, ಅಶ್ರಫ್, ಸುಭಾಷ್ ಮತ್ತಿತರರಿದ್ದರು.