ಕಾರ್ತಿ ಚಿದಂಬರಂ ವಿಚಾರಣೆ ದಿನ ತಿಳಿಸಲು ಸುಪ್ರೀಂ ಸೂಚನೆ

Update: 2019-01-28 14:47 GMT

ಹೊಸದಿಲ್ಲಿ, ಜ.28: ಐಎನ್‌ಎಕ್ಸ್ ಮೀಡಿಯಾ ಮತ್ತು ಏರ್‌ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ಯಾವಾಗ ವಿಚಾರಣೆ ನಡೆಸಲು ಬಯಸುತ್ತೀರಿ ಎಂಬುದನ್ನು ಜನವರಿ 30ರ ಒಳಗೆ ತಿಳಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

‘ಟೋಟಸ್ ಟೆನಿಸ್’ ಸಂಸ್ಥೆ ಮುಂದಿನ ಕೆಲ ತಿಂಗಳಲ್ಲಿ ಫ್ರಾನ್ಸ್, ಸ್ಪೇನ್, ಜರ್ಮನಿ ಹಾಗೂ ಬ್ರಿಟನ್‌ನಲ್ಲಿ ಅಂತರಾಷ್ಟ್ರೀಯ ಟೆನಿಸ್ ಟೂರ್ನಿ ಆಯೋಜಿಸುತ್ತಿದ್ದು ಅದರಲ್ಲಿ ಪಾಲ್ಗೊಳ್ಳಲು ತನಗೆ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಬೇಕೆಂದು ಕೋರಿ ಕಾರ್ತಿ ಚಿದಂಬರಂ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮತ್ತು ನ್ಯಾ. ಸಂಜೀವ್ ಖನ್ನ ಅವರಿದ್ದ ನ್ಯಾಯಪೀಠ, ನಾವು ಇಬ್ಬರಿಗೂ ಭರವಸೆ ನೀಡುತ್ತೇವೆ. ನೀವು ವಿಚಾರಣೆ ನಡೆಸಿ, ಅವರು ತಮ್ಮ ಟೆನಿಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ. ಈ ಹಿನ್ನೆಲೆಯಲ್ಲಿ ಅವರನ್ನು ಯಾವಾಗ ವಿಚಾರಣೆ ನಡೆಸಲು ಬಯಸುತ್ತೀರಿ ಎಂಬುದನ್ನು ಜನವರಿ 30ರೊಳಗೆ ತಿಳಿಸಿ ಎಂದು ಜಾರಿ ನಿರ್ದೇಶನಾಲಯ(ಇಡಿ) ಪ್ರತಿನಿಧಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಗೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News