ಸಕ್ರಿಯರಾಗಿಲ್ಲದವರು ಸ್ವಯಂ ಪ್ರೇರಿತರಾಗಿ ಹುದ್ದೆ ತ್ಯಜಿಸಿ: ಕೋಟ
ಉಡುಪಿ, ಜ.28: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂದೆ ಬಿಡು ವಿಲ್ಲದ ಕೆಲಸಗಳಿರುವುದರಿಂದ ವ್ಯವಹಾರಿಕ ಹಾಗೂ ಕೌಟುಂಬಿಕ ಸಮಸ್ಯೆ ಗಳಿಂದ ಸಕ್ರಿಯರಾಗಿಲ್ಲದ ಪದಾಧಿಕಾರಿಗಳು ತಮ್ಮ ಹುದ್ದೆಗಳನ್ನು ಸ್ವಯಂ ಪ್ರೇರಿತರಾಗಿ ತ್ಯಜಿಸಿ ಪೂರ್ಣ ಪ್ರಮಾಣದಲ್ಲಿ ಸಕ್ರಿಯರಾಗಿರುವವರಿಗೆ ಬಿಟ್ಟು ಕೊಡಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ 2019ರ ಲೋಕಸಭಾ ಚುನಾವಣೆಯ ಪೂರ್ವ ಸಿದ್ಧತೆಗಾಗಿ ಸೋಮವಾರ ಕಡಿಯಾಳಿಯಲ್ಲಿರುವ ಬಿಜೆಪಿ ಕಚೇರಿ ಯಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮುಂದಿನ ಲೋಕಸಭಾ ಚುನಾವಣೆಗಾಗಿ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಶಕ್ತಗೊಳಿಸಬೇಕು. ಆ ಮೂಲಕ ಹೆಚ್ಚು ಮತಗಳು ಬಿಜೆಪಿಗೆ ಬರುವಂತೆ ಮಾಡಬೇಕು. ಅಲ್ಲದೆ ಶಕ್ತಿ ಕೇಂದ್ರಗಳು ವ್ಯವಸ್ಥಿತವಾಗಿ ಕೆಲಸ ಮಾಡಬೇಕು. ಸಕ್ರಿಯರಾಗಿರುವವರನ್ನು ಪ್ರಮುಖ ಹುದ್ದೆಗಳಿಗೆ ನೇಮಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಸಾಧನೆಗಳನ್ನು ಜನಸಾಮಾನ್ಯ ರಿಗೆ ತಲುಪಿಸಬೇಕಾದ ಅಗತ್ಯ ಎದುರಾಗಿದೆ. ಈ ನಿಟ್ಟಿನಲ್ಲಿ ಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಪಕ್ಷ ಸಂಘಟನೆ ಹಾಗೂ ಕೇಂದ್ರ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಕಳ ಶಾಸಕ ಸುನೀಲ್ ಕುಮಾರ್, ಜಿಪಂ ಅಧ್ಯಕ್ಷ ದಿನಕರ ಬಾಬು, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಬಿಜೆಪಿ ವಿಭಾಗೀಯ ಉಸ್ತುವಾರಿ ಉದಯ ಕುಮಾರ್ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯಕ್ ಕುಯಿಲಾಡಿ ಕಾರ್ಯಕ್ರಮ ನಿರೂಪಿಸಿ ದರು.