95 ವರ್ಷದ ಈ ಪದ್ಮ ಪ್ರಶಸ್ತಿ ಪುರಸ್ಕೃತ ಅತ್ಯಂತ ಹೆಚ್ಚು ವೇತನ ಪಡೆಯುವ ಸಿಇಒ!

Update: 2019-01-28 16:38 GMT

‘ಅಸಲಿ ಮಸಾಲಾ ಸಚ್ ಸಚ್ ’ ಎಂಬ ಜಿಂಗಲ್‌ ನ ಹಿನ್ನೆಲೆಯಲ್ಲಿ ‘ದಾದಾಜಿ’ ನವದಂಪತಿಗಳನ್ನು ಆಶೀರ್ವದಿಸುವ,ಪುಟ್ಟ ಮಕ್ಕಳನ್ನು ಮುದ್ದಿಸುವ ಮತ್ತು ಹೆಜ್ಜೆಗಳನ್ನು ಕುಣಿಸುವ ಟಿವಿ ಜಾಹೀರಾತು ನಿಮ್ಮ ನೆನಪಿನಲ್ಲಿರಬಹುದು. ಈ ದಾದಾಜಿಯ ಹೆಸರು ಧರಂ ಪಾಲ್ ಗುಲಾಟಿ. 95ರ ಹರೆಯದ ಇವರು ಬಹುಶಃ ವಿಶ್ವದಲ್ಲಿ ಅತ್ಯಂತ ಹಿರಿಯ ವಯಸ್ಸಿನ ಜಾಹೀರಾತು ನಟನಾಗಿ ಮೆರೆಯುತ್ತಿದ್ದಾರೆ. ಅವರ ಪ್ರಸಿದ್ಧಿಗೆ ಇದೊಂದೇ ಕಾರಣವಲ್ಲ. ಅವರು 2,000 ಕೋ.ರೂ.ಮೌಲ್ಯದ ‘ಮಹಾಶಯ ದೀ ಹಟ್ಟಿ(ಎಂಡಿಎಚ್)’ ಸಮೂಹದ ಮಾಲಿಕರೂ ಆಗಿದ್ದಾರೆ. ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿಯ ಸಾಧನೆಗಾಗಿ ಈ ಬಾರಿಯ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಈ ದಾದಾಜಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾದಾಗಿನಿಂದ ಅವರಿಗೆ ಅಭಿನಂದನಾ ಕರೆಗಳ ಮಹಾಪೂರವೇ ಹರಿದುಬರುತ್ತಿದೆ. ‘ಮಹಾಶಯಜಿ’ ಎಂದೇ ಜನಪ್ರಿಯರಾಗಿರುವ ಅವರು ತನ್ನ ಟ್ರೇಡ್‌ಮಾರ್ಕ್ ಕೆಂಪು ರುಮಾಲು ಮತ್ತು ಬಿಳಿಯ ಮೀಸೆಯಿಂದ ಜನರ ಪ್ರೀತಿಪಾತ್ರರಾಗಿದ್ದಾರೆ. ಅದನ್ನು ಅವರೂ ಇಷ್ಟಪಡುತ್ತಾರೆ. ‘‘ಮೈ ಔರ್ ಕೋಯಿ ನಶಾ ನಹೀಂ ಕರತಾ. ಮುಝೆ ಪ್ಯಾರ್ ಕೀ ನಶಾ ಹೈ( ಪ್ರೀತಿಯ ಚಟವೊಂದನ್ನು ಬಿಟ್ಟರೆ ಬೇರೆ ಯಾವುದೇ ಚಟ ನನಗಿಲ್ಲ). ಮಕ್ಕಳು ಮತ್ತು ಯುವಜನರು ನನ್ನನ್ನು ಭೇಟಿಯಾಗಿ ನನ್ನ ಚಿತ್ರಗಳನ್ನು ಮತ್ತು ಸೆಲ್ಫಿಗಳನ್ನು ತೆಗೆದುಕೊಳ್ಳುವುದನ್ನು ನಾನು ಬಹುವಾಗಿ ಇಷ್ಟಪಡುತ್ತೇನೆ ’’ ಎನ್ನುತ್ತಾರೆ ಈ ದಾದಾಜಿ.

ಅಂದ ಹಾಗೆ ಐದನೇ ತರಗತಿಯಲ್ಲಿದ್ದಾಗಲೇ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ನೀಡಿದ್ದ ಗುಲಾಟಿ ಇಂದು ಫಾಸ್ಟ್ ಮೂವಿಂಗ್ ಕನ್ಸೂಮರ್ ಗುಡ್ಸ್ (ಎಫ್‌ಎಂಜಿಸಿ) ಕ್ಷೇತ್ರದಲ್ಲಿ ಅತ್ಯಂತ ಅಧಿಕ ವೇತನವನ್ನು ಪಡೆಯುತ್ತಿರುವ ಸಿಇಒ ಆಗಿದ್ದಾರೆ. 2018ರಲ್ಲಿ ಅವರು 25 ಕೋ.ರೂ.ಗೂ ಅಧಿಕ ವೇತನವನ್ನು ಪಡೆದಿದ್ದಾರೆ.

  1923,ಮಾರ್ಚ್ 27ರಂದು ಈಗ ಪಾಕಿಸ್ತಾನದಲ್ಲಿರುವ ಸಿಯಾಲಕೋಟ್‌ನಲ್ಲಿ ಜನಿಸಿದ್ದ ಗುಲಾಟಿ ಅವರು ಕಡುಬಡತನದಿಂದ ಇಂದು ಭಾರೀ ಶ್ರೀಮಂತಿಕೆಯನ್ನು ಪಡೆದಿದ್ದಾರೆ. ವಿಭಜನೆಯ ಬಳಿಕ ಗುಲಾಟಿ ಮತ್ತು ಅವರ ಕುಟುಂಬ ಭಾರತಕ್ಕೆ ಬಂದಾಗ ಅವರ ಬಳಿ ಸ್ವಂತದ್ದಾದ ಕೇವಲ 1,500 ರೂ.ಗಳಿದ್ದವು. ಗುಲಾಟಿ ಜೀವನ ನಿರ್ವಹಣೆಗಾಗಿ ಆರಂಭದ ವರ್ಷಗಳಲ್ಲಿ ದಿಲ್ಲಿಯಲ್ಲಿ ಟಾಂಗಾ ಓಡಿಸುತ್ತಿದ್ದರು. ಕೆಲವೇ ಸಮಯದಲ್ಲಿ ಕರೋಲ್ ಬಾಗ್‌ನ ಅಜ್ಮಲ್ ಖಾನ್ ರಸ್ತೆಯಲ್ಲಿ ಮಸಾಲಾ ಅಂಗಡಿಯೊಂದನ್ನು ಆರಂಭಿಸುವಷ್ಟು ಹಣವನ್ನು ಅವರ ಕುಟುಂಬವು ಸಂಪಾದಿಸಿತ್ತು. ನಿಧಾನವಾಗಿ ಅಭಿವೃದ್ಧಿಯ ಪಥದಲ್ಲಿ ಸಾಗಿದ್ದ ಗುಲಾಟಿಯವರ ಮಸಾಲಾ ಉದ್ಯಮ ಇಂದು ಭಾರತ ಮತ್ತು ದುಬೈನಲ್ಲಿ 18ಕ್ಕೂ ಅಧಿಕ ಫ್ಯಾಕ್ಟರಿಗಳನ್ನು ಹೊಂದಿದ್ದು,ವಿಶ್ವಾದ್ಯಂತ ಎಂಡಿಎಚ್ ಬ್ರಾಂಡಿನ ವಿವಿಧ ಮಸಾಲಾಗಳನ್ನು ಮಾರಾಟ ಮಾಡುತ್ತಿದೆ. 62 ವಿವಿಧ ಉತ್ಪನ್ನಗಳನ್ನು ಕಂಪನಿಯು ಮಾರಾಟ ಮಾಡುತ್ತಿದ್ದು,ಉತ್ತರ ಭಾರತದಲ್ಲಿ ಶೇ.80ರಷ್ಟು ಮಾರುಕಟ್ಟೆ ಪಾಲು ಹೊಂದಿರುವುದಾಗಿ ಹೇಳಿಕೊಂಡಿದೆ.

ಇನ್ನೆರಡು ತಿಂಗಳುಗಳಲ್ಲಿ 96ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿರುವ ಗುಲಾಟಿ ಅಜ್ಜ ಈಗಲೂ ಪ್ರತಿದಿನ ದಿಲ್ಲಿ ಅಥವಾ ನೆರೆಯ ಫರೀದಾಬಾದ್ ಅಥವಾ ಗುಡ್ಗಾಂವ್‌ನಲ್ಲಿರುವ ಕನಿಷ್ಠ ಒಂದು ಎಂಡಿಎಚ್ ಫ್ಯಾಕ್ಟರಿಗಾದರೂ ಭೇಟಿ ನೀಡುತ್ತಾರೆ. ಗುಲಾಟಿಯವರ ಓರ್ವ ಪುತ್ರ ಮತ್ತು ಆರು ಪುತ್ರಿಯರು ಅವರು ಕಟ್ಟಿರುವ ಮಸಾಲಾ ಸಾಮ್ರಾಜ್ಯವನ್ನು ನೋಡಿಕೊಳ್ಳಲು ಅವರಿಗೆ ನೆರವಾಗುತ್ತಿದ್ದಾರೆ.

ಸರಳವಾದ ಆಹಾರ ಮತ್ತು ವ್ಯಾಯಾಮ ತನ್ನ ದೀರ್ಘಾಯುಷ್ಯಕ್ಕೆ ಕಾರಣವೆನ್ನುತ್ತಾರೆ ಗುಲಾಟಿ. ‘‘ನಾನು ಮುದುಕನಲ್ಲ,ನಾನಿನ್ನೂ ಯುವಕನಾಗಿಯೇ ಇದ್ದೇನೆ’ ಎನ್ನುವ ಅವರು ತನ್ನ ಮಾಂಸಖಂಡಗಳನ್ನು ಮತ್ತು ಬಿಳಿಯ ಮುತ್ತಿನಂತಿರುವ ಹಲ್ಲುಗಳನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಾರೆ. ಪ್ರತಿ ದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಏಳುವ ಅವರು ವಾಕಿಂಗ್ ಮುಗಿಸಿದ ಬಳಿಕ ಯೋಗಾಭ್ಯಾಸವನ್ನು ಮಾಡಿ ಮಿತವಾದ ಬ್ರೇಕ್‌ಫಾಸ್ಟ್ ಸೇವಿಸುತ್ತಾರೆ. ಸಂಜೆ ಮತ್ತು ರಾತ್ರಿ ಊಟದ ಬಳಿಕವೂ ವಾಕಿಂಗ್ ಮಾಡುವ ಅವರು ತನ್ನ ಮೊಬೈಲ್ ಪೋನ್‌ನಲ್ಲಿ ಇತ್ತೀಚಿನ ಸುದ್ದಿಗಳನ್ನು ತಿಳಿದುಕೊಳ್ಳುತ್ತಿರುತ್ತಾರೆ ಮತ್ತು ನಿಯಮಿತವಾಗಿ ವಾಟ್ಸ್‌ಆ್ಯಪ್‌ನ್ನು ನೋಡುತ್ತಿರುತ್ತಾರೆ.

ಅಂದ ಹಾಗೆ ಪ್ರಚಾರದಲ್ಲಿರುವುದನ್ನು ಅವರು ಈಗಲೂ ಇಷ್ಟಪಡುತ್ತಾರೆ. ಪಶ್ಚಿಮ ದಿಲ್ಲಿಯ ಕೀರ್ತಿ ನಗರ ಕೈಗಾರಿಕಾ ಪ್ರದೇಶದಲ್ಲಿರುವ ಎಂಡಿಎಚ್ ಹೌಸ್‌ನ ಗೋಡೆಗಳೆಲ್ಲ ಅವರ ಚಿತ್ರಗಳಿಂದ ತುಂಬಿಹೋಗಿವೆ. ಹೊಳೆಯುವ ಚೌಕಟ್ಟುಗಳಲ್ಲಿ,ಕ್ಯಾಲೆಂಡರ್‌ಗಳಲ್ಲಿ,ಬೃಹತ್ ಕಟ್‌ಔಟ್‌ಗಳಲ್ಲಿ ಉತ್ಸಾಹದಿಂದ ಪುಟಿಯುವ ಅವರ ಚಿತ್ರಗಳು ಅತಿಥಿಗಳನ್ನು ಸ್ವಾಗತಿಸುತ್ತವೆ. ಚಿತ್ರಗಳ ಮೂಲಕ ಅವರ ಜೀವನವನ್ನು ಬಿಂಬಿಸುವ ಗಡಿಯಾರವೂ ಇಲ್ಲಿದೆ.

 ಗುಲಾಟಿ ಟಿವಿ ಜಾಹೀರಾತುಗಳಲ್ಲಿ ನಟಿಸಲು ಆರಂಭಿಸಿದ್ದು ಆಕಸ್ಮಿಕವಾಗಿ. ಅದೊಂದು ದಿನ ಅವರ ಕಂಪನಿಯ ಜಾಹೀರಾತಿನಲ್ಲಿ ಮದುಮಗಳ ತಂದೆಯ ಪಾತ್ರವನ್ನು ವಹಿಸಬೇಕಿದ್ದ ನಟ ಚಿತ್ರೀಕರಣಕ್ಕೆ ಗೈರುಹಾಜರಾಗಿದ್ದ. ಹೀಗಾಗಿ ನಿರ್ದೇಶಕ ಜಾಹೀರಾತಿನಲ್ಲಿ ನಟಿಸುವಂತೆ ಸಲಹೆ ನೀಡಿದ್ದ. ಇದರಿಂದ ಸ್ವಲ್ಪ ದುಡ್ಡು ಉಳಿಯುತ್ತದೆ ಎಂದುಕೊಂಡ ಗುಲಾಟಿ ಆತನ ಸಲಹೆಯನ್ನು ಒಪ್ಪಿಕೊಂಡಿದ್ದರು. ಆಬಳಿಕ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಅಂದಿನಿಂದಲೂ ಎಂಡಿಎಚ್‌ನ ಎಲ್ಲ ಜಾಹೀರಾತುಗಳಲ್ಲಿಯೂ ಗುಲಾಟಿ ಅಜ್ಜ ಕಾಣಿಸಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News