×
Ad

ಕೂರ್ಮಗಡ ದೋಣಿ ದುರಂತ 8 ದಿನಗಳ ಬಳಿಕ ಬಾಲಕನ ಮೃತದೇಹ ಪತ್ತೆ

Update: 2019-01-28 20:43 IST

ಭಟ್ಕಳ, ಜ. 28: ಕಾರವಾರ ಸಮೀಪದ ಕೂರ್ಮಗಡ ಜಾತ್ರೆಗೆಂದು ತೆರಳಿದ್ದ 35ಮಂದಿ ಇದ್ದ ದೋಣಿ ಜ. 21ರಂದು ಮುಳುಗಿ 16 ಮಂದಿ ಜಲಸಮಾಧಿಯಾಗಿದ್ದು ಅದರಲ್ಲಿ 15 ಜನರ ಮೃತದೇಹಗಳು ಈಗಾಗಲೇ ಪತ್ತೆಯಾಗಿದ್ದು ಓರ್ವ ಬಾಲಕನ ಮೃತದೇಹ ಮಾತ್ರ 8 ದಿನಗಳ ಬಳಿಕ ಭಟ್ಕಳಕ್ಕೆ ಸಮೀಪ ಅಳ್ವೆಕೋಡಿ ಎಂಬಲ್ಲಿ ಸೋಮವಾರ ಪತ್ತೆಯಾಗಿದೆ.

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹೊಸೂರಿನ ಸಂದೀಪ (10) ಪತ್ತೆಯಾದ ಮೃತ ಬಾಲಕ. ನೇತ್ರಾಣಿ ದ್ವೀಪದ ಬಳಿ ನಿನ್ನೆ ಮೀನುಗಾರರಿಗೆ ಕಂಡಿರುವ ಬಗ್ಗೆ ಕರಾವಳಿ ಕಾವಲು ಪೊಲೀಸರಿಗೆ ತಿಳಿಸಿದ್ದರು. ತಕ್ಷಣ ಅಲ್ಲಿಗೆ ತೆರಳಿದಾಗ ದೇಹ ಪತ್ತೆಯಾಗಿರಲಿಲ್ಲ. ಕೊನೆಗೆ ಭಟ್ಕಳದ ಕಡೆ ನೀರಿನ ಸೆಳವು ಇರುವುದರಿಂದ ಆ ಕಡೆ ತೆರಳಿರುವ ಬಗ್ಗೆ ಹಲವು ಮೀನುಗಾರರು ಅನುಮಾನ ವ್ಯಕ್ತಪಡಿಸಿದ್ದರು. ಅದರಂತೆ ಸತತ ಹುಡುಕಾಟದಿಂದಾಗಿ ಇಂದು ಮೃತದೇಹ ಪತ್ತೆಯಾಗಿದೆ.

ನೀರು ಕುಡಿದಿದ್ದರಿಂದ ಬಾಲಕನ ದೇಹ ಊದಿಕೊಂಡಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಕಾವಲು ಪಡೆ ಪೊಲೀಸರು ಭಟ್ಕಳದ ಅಳ್ವೆಕೋಡಿ ಬಳಿ ತಂದು ಕಾರವಾರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾತಂರಿಸುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಸಾಜಿದ್ ಆಹ್ಮದ್ ಮುಲ್ಲಾ, ಸಿಪಿಐ ಗಣೇಶ ತಹಸಿಲದ್ದಾರ್ ವಿ.ಎನ್.ಬಾಡ್ಕರ್ ಸ್ಥಳದಲ್ಲಿ ಹಾಜರಿದ್ದರು. ತಾಲೂಕಾಡಳಿತದಿಂದ ಬಾಲಕನ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆಯನ್ನು ಮಾಡಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News