ಗಡ್ಕರಿ ಹೇಳಿಕೆ ಬಿಜೆಪಿ ಮತ್ತು ಚುನಾವಣೆಗಳ ಬಗ್ಗೆ ಏನನ್ನು ಸೂಚಿಸುತ್ತಿದೆ?

Update: 2019-01-28 15:28 GMT

ರಾಜಕಾರಣ ಒಂದು ಕಲೆಯಾಗಿದ್ದರೆ ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ನಿತಿನ್ ಗಡ್ಕರಿ ಅವರು ಕಲಾವಿದನನ್ನೂ ಮೀರಿಸಿದ್ದಾರೆ. ಕಲೆಯು ವ್ಯಾಖ್ಯಾನಗಳಿಗೆ ಮುಕ್ತವಾಗಿರುವಂತೆ ಗಡ್ಕರಿಯವರೂ ವಿವಿಧ ರೀತಿಗಳಲ್ಲಿ ವ್ಯಾಖ್ಯಾನಿಸಲಾಗುವಂತೆ ಹೇಳಿಕೆಗಳನ್ನು ನೀಡುತ್ತಿರುತ್ತಾರೆ.

ರವಿವಾರ,ಜ.27ರಂದು ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗಡ್ಕರಿಯವರು ‘ರಾಜಕೀಯ ನಾಯಕರು ಜನರಿಗೆ ದೊಡ್ಡ ದೊಡ್ಡ ಕನಸುಗಳನ್ನು ತೋರಿಸುತ್ತಾರೆ. ಈ ಕನಸುಗಳು ನನಸಾಗದಿದ್ದರೆ ಅವರು ಜನರ ಆಕ್ರೋಶಕ್ಕೆ ಗುರಿಯಾಗುತ್ತಾರೆ. ಹೀಗಾಗಿ ಈಡೇರಿಸಲು ಸಾಧ್ಯವಿದ್ದರೆ ಮಾತ್ರ ಅಂತಹ ಕನಸುಗಳನ್ನು ತೋರಿಸಬೇಕು ’ಎಂದು ಹೇಳಿದ್ದಾರೆ.

ಗಡ್ಕರಿಯವರ ಹೇಳಿಕೆಯು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಪರೋಕ್ಷ ಸಂದೇಶವಾಗಿದೆಯೆಂದು ರಾಜಕೀಯ ವೀಕ್ಷಕರು ಮತ್ತು ಹಲವಾರು ಪ್ರತಿಪಕ್ಷ ನಾಯಕರು ದಿಢೀರ್ ನಿರ್ಧಾರಕ್ಕೆ ಬಂದಿದ್ದಾರೆ. ಬಿಜೆಪಿ 2014ರ ಚುನಾವಣೆಗಳ ಸಂದರ್ಭ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲಗೊಂಡಿದೆಯೆಂದು ಪ್ರತಿಪಕ್ಷ ಮತ್ತು ಸಮಾಜದ ಹಲವು ವರ್ಗಗಳು ಆರೋಪಿಸುತ್ತಿರುವುದ್ನು ಪರಿಗಣಿಸಿದರೆ ಇಂತಹ ಊಹೆ ನಿರೀಕ್ಷಿತವೇ ಆಗಿದೆ.

ಗಡ್ಕರಿ ಪಕ್ಷದ ಸಹೋದ್ಯೋಗಿಗಳ ಬಗ್ಗೆ ದುರ್ಭಾವನೆಗಳನ್ನು ನಿರಾಕರಿಸಲು ಮತ್ತು ಪ್ರತಿಪಕ್ಷಗಳು ತನ್ನ ಮಾತುಗಳನ್ನು ಅತಿಯಾಗಿ ಅರ್ಥೈಸಿಕೊಳ್ಳುತ್ತವೆ ಎಂದು ನಿಂದಿಸಲು ತನ್ನ ಹೇಳಿಕೆಗಳಲ್ಲಿ ಸಾಕಷ್ಟು ಅವಕಾಶಗಳನ್ನು ಇಟ್ಟುಕೊಳ್ಳುವ ಚಾಣಾಕ್ಷ ರಾಜಕಾರಣಿಯಾಗಿದ್ದಾರೆ. ಕಳೆದ ತಿಂಗಳು ಮೂರು ಹಿಂದಿ ಭಾಷಿಕ ರಾಜ್ಯಗಳ ವಿಧಾನಸಭಾ ಚುನಾವಣೆೆಗಳಲ್ಲಿ ಬಿಜೆಪಿಯು ಅಧಿಕಾರ ಕಳೆದುಕೊಂಡ ಬಳಿಕ ಗಡ್ಕರಿಯವರು,ನಾಯಕತ್ವವು ಸೋಲು ಮತ್ತು ವೈಫಲ್ಯಗಳನ್ನು ಒಪ್ಪಿಕೊಳ್ಳುವ ಪ್ರವೃತ್ತಿಯನ್ನೂ ಹೊಂದಿರಬೇಕು ಎಂದು ಹೇಳಿದ್ದರು. ಆಗಲೂ ಪ್ರತಿಪಕ್ಷಗಳು ಈ ಹೇಳಿಕೆಯನ್ನು ಮೋದಿ-ಶಾ ಜೋಡಿಗೆ ಪರೋಕ್ಷ ಸಂದೇಶವೆಂದೇ ಪರಿಗಣಿಸಿದ್ದವು. ಬಳಿಕ ಗಡ್ಕರಿ ತನ್ನ ಹೇಳಿಕೆಯನ್ನು ‘ತಿರುಚಲಾಗಿದೆ’ ಎಂದು ಸಮಜಾಯಿಷಿ ನೀಡಿದ್ದರು.

 ಗಡ್ಕರಿಯವರ ಹೇಳಿಕೆಗಳ ಕುರಿತಂತೆ ಆಸಕ್ತಿಯ ವಿಷಯವೆಂದರೆ ಇಂತಹ ಹೇಳಿಕೆಗಳು ಹೊರಬೀಳುವ ಸಂದರ್ಭಗಳು. ಸಾರ್ವತ್ರಿಕ ಚುನಾವಣೆಗಳು ಸನ್ನಿಹಿತವಾಗುತ್ತಿರುವ ಮತ್ತು ಬಿಜೆಪಿ ಹಿನ್ನಡೆಯಲ್ಲಿರುವಾಗ ಕೇಂದ್ರದಲ್ಲಿ ಸರಕಾರ ರಚನೆಗೆ ಬಿಜೆಪಿಗೆ ಇತರ ಪಕ್ಷಗಳ ಬೆಂಬಲ ಅಗತ್ಯವಾದರೆ ಆಗ ತನ್ನನ್ನು ಸರ್ವಾನುಮತದ ಅಭ್ಯರ್ಥಿಯನ್ನಾಗಿ ಬಿಂಬಿಸಿಕೊಳ್ಳಲು ಗಡ್ಕರಿ ಪೂರ್ವ ಸಿದ್ಧತೆಗಳನ್ನು ನಡೆಸುತ್ತಿದ್ದಾರೆಯೇ?, ಇದು ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆಯಲು ವಿಫಲಗೊಂಡ ಸಂದರ್ಭದಲ್ಲಿ ಬಳಸಲು ಬಿಜೆಪಿಯ ಪ್ಲಾನ್ ಬಿ ಆಗಿದೆಯೇ?, ಇದು ಮೋದಿ ಮತ್ತು ಶಾ ನಿರ್ಮಿಸಿರುವ ಬಿಜೆಪಿ ಸಾಮ್ರಾಜ್ಯದಲ್ಲಿ ಬಿರುಕುಗಳು ಮೂಡುತ್ತಿರುವ ಸಂಕೇತವೇ?,

ಸದ್ಯಕ್ಕಂತೂ ಇವೆಲ್ಲ ಊಹಾಪೋಹದ ವಿಷಯಗಳಾಗಿವೆ. ಆದರೂ ಒಂದು ವಿಷಯ ಹೆಚ್ಚೆಚ್ಚು ನಿರ್ದಿಷ್ಟಗೊಳ್ಳುತಿದೆ: ಬಿಜೆಪಿ ಈಗ ಹಿಂದಿನಷ್ಟು ಆತ್ಮವಿಶ್ವಾಸವನ್ನು ಪ್ರದರ್ಶಿಸುತ್ತಿಲ್ಲ,ಅದು ಕೊಂಚ ಚಿಂತೆಯಲ್ಲಿರುವಂತೆ,ಬಹುಶಃ ಗೊಂದಲದಲ್ಲಿರುವಂತೆ ಕಂಡು ಬರುತ್ತಿದೆ.

ಕೃಪೆ: Moneycontrol.com 

Writer - ವಿಜು ಚೆರಿಯನ್

contributor

Editor - ವಿಜು ಚೆರಿಯನ್

contributor

Similar News