×
Ad

ಚಿಟ್ ಫಂಡ್ ವಂಚನೆ ಹಗರಣ: ಟಿಎಂಸಿ ಸಂಸದನ 239 ಕೋ. ರೂ. ಆಸ್ತಿ ಮುಟ್ಟುಗೋಲು

Update: 2019-01-28 21:13 IST

ಹೊಸದಿಲ್ಲಿ, ಜ.28: ಚಿಟ್ ಫಂಡ್ ಮೂಲಕ ಹೂಡಿಕೆದಾರರಿಂದ ಹಣ ಸಂಗ್ರಹಿಸಿ ಅದನ್ನು ಅಕ್ರಮವಾಗಿ ವರ್ಗಾವಣೆಗೊಳಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಟಿಎಂಸಿಯ ರಾಜ್ಯಸಭಾ ಸದಸ್ಯ ಕೆಡಿ ಸಿಂಗ್‌ ಗೆ ಸೇರಿದ 239.29 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ.

‘ಆಲ್‌ಕೆಮಿಸ್ಟ್ ಇನ್‌ಫ್ರಾ ರಿಯಾಲ್ಟಿ ಲಿ.’ ಸಂಸ್ಥೆಗೆ ಸೇರಿರುವ ಚಂಡೀಗಡ, ಪಂಚಕುಲ, ಡೇರಾಬಸ್ಸಿ, ಪಂಜಾಬ್‌ನ ಎಸ್‌ಎಎಸ್ ನಗರ, ಶಿಮ್ಲ ಹಾಗೂ ಇತರೆಡೆ ಇರುವ ಆಸ್ತಿಯನ್ನು ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಖಾತೆಗಳನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಈಗಾಗಲೇ ಆದೇಶ ಜಾರಿಗೊಳಿಸಲಾಗಿದೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಸಂಸ್ಥೆಯ ಅಧ್ಯಕ್ಷರಾಗಿದ್ದ ಸಿಂಗ್ 2012ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಅವರ ರಾಜ್ಯಸಭಾ ಪ್ರೊಫೈಲ್(ಸಂಕ್ಷಿಪ್ತ ವ್ಯಕ್ತಿಚಿತ್ರ)ನಲ್ಲಿ ಅವರನ್ನು ಸಂಸ್ಥೆಯ ಸ್ಥಾಪಕ ಮತ್ತು ಅಧ್ಯಕ್ಷರೆಂದೇನಮೂದಿಸಲಾಗಿದೆ. ಈ ಸಂಸ್ಥೆ ಹಣ ಅಕ್ರಮ ಸಾಗಣೆಯ ಮೂಲಕ ಹೂಡಿಕೆದಾರರನ್ನು ವಂಚಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ 2016ರಲ್ಲಿ ಸಂಸ್ಥೆ, ಅದರ ನಿರ್ದೇಶಕರು ಹಾಗೂ ಇತರರ ವಿರುದ್ಧ ‘ಸೆಬಿ’ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಹೂಡಿಕೆದಾರರಿಂದ ಹಣ ಪಡೆದು ಅದನ್ನು ಇತರ ಕಾರ್ಯಗಳಿಗೆ ಬಳಸಲು ನಕಲಿ ಸಂಸ್ಥೆಗಳಿಗೆ ಅಕ್ರಮವಾಗಿ ವರ್ಗಾಯಿಸಿರುವುದು ತನಿಖೆಯಿಂದ ತಿಳಿದು ಬಂದಿದೆ.

ಹೀಗೆ ವರ್ಗಾಯಿಸಲಾದ ಹಣದಿಂದ ಹಲವೆಡೆ ಆಸ್ತಿಗಳನ್ನು ಖರೀದಿಸಲಾಗಿದ್ದು ಇವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಇಡಿ ತಿಳಿಸಿದೆ. 2015ರ ಮೊದಲು ‘ಸೆಬಿ’ಯಿಂದ ಅನುಮತಿ ಪಡೆಯದೆ ಸಂಸ್ಥೆಯು ಚಿಟ್ ಫಂಡ್ ಯೋಜನೆ ಆರಂಭಿಸಿ ಸುಮಾರು 1,916 ಕೋಟಿ ರೂ. ಮೊತ್ತವನ್ನು ಜನರಿಂದ ಸಂಗ್ರಹಿಸಿತ್ತು. ಈ ಬಗ್ಗೆ ದೂರು ಕೇಳಿ ಬಂದ ಬಳಿಕ ‘ಸೆಬಿ’ ತನಿಖೆ ನಡೆಸಿದಾಗ ತಾನು 1,077 ಕೋಟಿ ರೂ. ಮೊತ್ತವನ್ನು ಮರಳಿಸಿದ್ದು ಉಳಿದ ಹಣವನ್ನು ಮರಳಿಸಲು ಕಾಲಾವಕಾಶ ನೀಡುವಂತೆ ಸಂಸ್ಥೆ ಕೋರಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು ಮತ್ತು ವಿಚಾರಣೆಗೆ ಹಾಜರಾಗುವಂತೆ 2018ರಲ್ಲಿ ಸಿಂಗ್‌ಗೆ ಸಮನ್ಸ್ ಜಾರಿಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News