ಆರೆಸ್ಸೆಸ್ ಕಾರ್ಯಕರ್ತನ ಕೊಲೆ ಪ್ರಕರಣ: ಇದೀಗ ಹತ್ಯೆಯಾದವನೇ ಶಂಕಿತ ಆರೋಪಿ!

Update: 2019-01-28 15:57 GMT

ರತ್ನಾಮ್, ಜ. 28: ಕಳೆದ ವಾರ ನಡೆದ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ ಮಧ್ಯಪ್ರದೇಶದಲ್ಲಿ ಸಾಮೂಹಿಕ ಆಕ್ರೋಶಕ್ಕೆ ಕಾರಣವಾಗಿತ್ತು. 36ರ ಹರೆಯದ ಆರೆಸ್ಸೆಸ್ ಕಾರ್ಯಕರ್ತ ಹಿಮ್ಮತ್ ಪಾಟಿದಾರ್‌ನ ಮೃತದೇಹವನ್ನು ಘಾಷಿಗೊಳಿಸಲಾಗಿತ್ತು. ಮುಖವನ್ನು ಗುರುತು ಸಿಗದಂತೆ ವಿಕಾರಗೊಳಿಸಲಾಗಿತ್ತು. ಈ ಹತ್ಯೆ ಕುರಿತಂತೆ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ ಅನ್ನು ಗುರಿಯಾಗಿರಿಸಿ ವಾಗ್ದಾಳಿ ನಡೆಸಿತ್ತು. ಆದರೆ, ಈಗ ಪಾಟೀದರ್ ಜೀವಂತ ಇದ್ದಾನೆ. ಆತನೇ ಶಂಕಿತ ಕೊಲೆಗಾರ ಎಂಬುದು ಬಹಿರಂಗಗೊಂಡಿದೆ.

ರತ್ಲಾಂನ ಹೊಲದಲ್ಲಿ ಪತ್ತೆಯಾಗಿದ್ದ ಮೃತದೇಹ ಹಿಮ್ಮತ್ ಪಾಟೀದಾರ್‌ನದ್ದು ಅಲ್ಲ. ಅದು ಆತನ ಸಂಸ್ಥೆಯ ಉದ್ಯೋಗಿ ಮದನ್ ಮಾಳವೀಯದ್ದು. ಪಾಟಿದಾರ್‌ನಂತೆ ಕಾಣಲು ಆತನ ಉಡುಪನ್ನು ಮಾಳವಿಗೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಲದಲ್ಲಿ ಮುಳುಗಿದ್ದ ಹಿಮ್ಮತ್ ಪಾಟಿದಾರ್ ಜೀವ ವಿಮೆಯ 20 ಲಕ್ಷ ರೂಪಾಯಿ ಆಸೆಯಿಂದ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಜನವರಿ 23ರಂದು ಹಿಮ್ಮತ್ ತಂದೆ ತನ್ನ ಪುತ್ರ ಸಾವನ್ನಪ್ಪಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನೆ ನಡೆದ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಹಾಗೂ ಪೊಲೀಸ್ ನಾಯಿಗಳು ಆಗಮಿಸಿದ್ದವು. ತನಿಖೆ ನಡೆಸಲು ತಂಡವೊಂದನ್ನು ರಚಿಸಲಾಗಿತ್ತು. ಪೊಲೀಸರು ತನಿಖೆ ನಡೆಸಿದಾಗ ಹಿಮ್ಮತ್‌ನ ಫಾರ್ಮ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮದನ್ ಮಾಳವಿಯ ಜನವರಿ 22ರಿಂದ ನಾಪತ್ತೆಯಾಗಿರುವುದು ಬೆಳಕಿಗೆ ಬಂತು. ಮರಣೋತ್ತರ ಪರೀಕ್ಷೆಯಲ್ಲಿ ಮಾಳವಿಯನ್ನು ಹರಿತವಾದ ಆಯುಧದಿಂದ ಹತ್ಯೆ ನಡೆಸಿರುವುದಾಗಿ ತಿಳಿದು ಬಂತು. ಆತನ ಮುಖ ಗುರುತು ಸಿಗದಂತೆ ಸುಡಲಾಗಿತ್ತು. ಮಾಳವೀಯ ಕುಟುಂಬದವರು ಶವದ ಒಳ ಉಡುಪನ್ನು ಗುರುತಿಸಿದ್ದರು. ಈಗಾಗಲೇ ಕೊಲೆಯಾಗಿರುವುದು ಹಿಮ್ಮತ್ ಅಲ್ಲ ಮದನ್ ಮಾಳವೀಯ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ.

ಆದರೂ ಶವದ ಕೂದಲು ಹಾಗೂ ದೇಹದ್ರವದ ಮಾದರಿಗಳನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಹಿಮ್ಮತ್ ಕಾಣೆಯಾಗಿದ್ದಾನೆ. ಆತನ ಬಗ್ಗೆ ಮಾಹಿತಿ ನೀಡಿದವರಿಗೆ ಪೊಲೀಸರು 10 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News