ನನ್ನ ಹಿಂದೂ ಪತ್ನಿಯನ್ನು ಮುಟ್ಟಿದ್ದೇನೆ, ತಾಕತ್ತಿದ್ದರೆ ಕೈಕತ್ತರಿಸಿ
ಹೊಸದಿಲ್ಲಿ,ಜ.28: ಅನ್ಯಧರ್ಮೀಯ ಹುಡುಗರು ಹಿಂದು ಯುವತಿಯರ ಮೇಲೆ ಕೈ ಹಾಕಿದರೆ ಅಂಥವರ ಕೈಗಳನ್ನು ಹಿಂದು ಯುವಕರು ಕತ್ತರಿಸಬೇಕು ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ನೀಡಿರುವ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಇದೇ ವೇಳೆ, ಕಾಂಗ್ರೆಸ್ ನಾಯಕ ತೆಹ್ಸೀನ್ ಪೂನಾವಾಲಾ ತನ್ನ ಹಿಂದು ಪತ್ನಿಜೊತೆಗಿರುವ ಚಿತ್ರವನ್ನು ಟ್ವೀಟ್ ಮಾಡಿದ್ದು ಸಚಿವರಿಗೆ ಸವಾಲು ಹಾಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪೂನಾವಾಲಾ, “ನಾನು ನನ್ನ ಹಿಂದೂ ಪತ್ನಿಯನ್ನು ತಬ್ಬಿಕೊಂಡಿದ್ದೇನೆ. ನಿಮ್ಮಿಂದ ಏನಾಗುತ್ತದೋ ಅದನ್ನು ಮಾಡಿ. ಇದು ನಾನು ನಿಮಗೊಡ್ಡುವ ಸವಾಲು” ಎಂದು ಹೇಳಿದ್ದಾರೆ. ಇದೇ ವೇಳೆ ಹೆಗ್ಡೆ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಹೈದರಾಬಾದ್ ಸಂಸದ ಅಸಾದುದ್ದೀನ್ ಉವೈಸಿ, ಕೌಶಾಲ್ಯಭಿವೃದ್ಧಿ ಸಚಿವರಾಗಿ ಹೆಗ್ಡೆ ಅಭಿವೃದ್ಧಿಪಡಿಸಿರುವ ಒಂದೇ ಕೌಶಲ್ಯವೆಂದರೆ ಜನರನ್ನು ಹೊಡೆಯಿರಿ, ಕೊಲ್ಲಿರಿ ಎಂದು ಪ್ರಚೋದಿಸುವುದಾಗಿ ಎಂದು ವ್ಯಂಗ್ಯವಾಡಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ರಾವ್ ಹೆಗಡೆಯ ಹೇಳಿಕೆಯ ವಿರುದ್ಧ ಕಿಡಿಕಾರಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ, ರಾವ್ ಓರ್ವ ಮುಸ್ಲಿಂ ಯುವತಿಯ ಹಿಂದೆ ಓಡಿದ ವ್ಯಕ್ತಿ ಎಂದಷ್ಟೇ ನನಗೆ ಗೊತ್ತು ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ರಾವ್ ಪತ್ನಿ ತಬು ರಾವ್, “ಹೌದು, ನಾನು ಮುಸ್ಲಿಮಳಾಗಿ ಜನಿಸಿದ್ದೇನೆ. ಆದರೆ ಅದಕ್ಕೂ ಮೊದಲು ನಾನೋರ್ವ ಹೆಮ್ಮೆಯ ಭಾರತೀಯಳಾಗಿದ್ದೇನೆ. ಜಾತ್ಯತೀತತೆಯ ಅಡಿಪಾಯದ ಮೇಲೆ ರಚನೆಯಾಗಿರುವ ಭಾರತೀಯ ಸಂವಿಧಾನವು ಪ್ರತಿ ವ್ಯಕ್ತಿಗೂ ಯೋಚಿಸುವ, ಭಾವನೆ ವ್ಯಕ್ತಪಡಿಸುವ, ನಂಬಿಕೆಯ ಮತ್ತು ಧರ್ಮ ಪಾಲನೆಯ ಸ್ವಾತಂತ್ರವನ್ನು ನೀಡುತ್ತದೆ” ಎಂದು ತಿಳಿಸಿದ್ದಾರೆ.
ಕೆಟ್ಟ ರಾಜಕೀಯಕ್ಕಾಗಿ ಅನಂತ ಕುಮಾರ್ ಹೆಗಡೆ ನನ್ನನ್ನು ದಾಳವಾಗಿ ಬಳಸುವುದನ್ನು ನಾನು ವಿರೋಧಿಸುತ್ತೇನೆ ಎಂದು ತಬು ತಿಳಿಸಿದ್ದಾರೆ.