ಉಡುಪಿ: ಸೋಮವಾರ ಎಂಟು ಮಂಗಗಳ ಶವ ಪತ್ತೆ
ಉಡುಪಿ, ಜ.28: ಜಿಲ್ಲೆಯಲ್ಲಿ ಮಂಗಗಳ ಸಾವಿನ ಸಂಖ್ಯೆ ಏರುತಿದ್ದು, ಸೋಮವಾರ ಇನ್ನೂ ಎಂಟು ಮಂಗಗಳ ಕಳೇಬರ ವಿವಿದೆಡೆಗಳಲ್ಲಿ ಪತ್ತೆಯಾಗಿದೆ. ಇದರಿಂದ ಜ.8ರ ಬಳಿಕ ಪತ್ತೆಯಾದ ಮಂಗಗಳ ಕಳೇಬರಗಳ ಸಂಖ್ಯೆ 90ಕ್ಕೇರಿದೆ.
ಇಂದು ಕುಂದಾಪುರ ತಾಲೂಕಿನ ಬೆಳ್ವೆಯಲ್ಲಿ ಎರಡು, ಆಲೂರಿನಲ್ಲಿ ಒಂದು, ಕಾರ್ಕಳ ತಾಲೂಕಿನ ಹೆಬ್ರಿಯಲ್ಲಿ ಮೂರು, ಪಳ್ಳಿಯಲ್ಲಿ ಒಂದು ಹಾಗೂ ಇರ್ವತ್ತೂರಿನಲ್ಲಿ ಒಂದು ಮಂಗನ ಕಳೇಬರ ಪತ್ತೆಯಾಗಿದೆ. ಇವುಗಳಲ್ಲಿ ಹೆಬ್ರಿಯ ಒಂದು ಹಾಗೂ ಇರ್ವತ್ತೂರಿನ ಒಂದು ಮಂಗಗಳ ಅಟಾಪ್ಸಿ ನಡೆಸಿ ವಿಸೇರಾವನ್ನು ಶಿವಮೊಗ್ಗ ಮತ್ತು ಮಣಿಪಾಲಗಳ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಇದುವರೆಗೆ 30 ಮಂಗಗಳ ವಿಸೇರಾವನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಇವುಗಳಲ್ಲಿ 25ರ ವರದಿ ಬಂದಿದ್ದು, 12ರಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾದರೆ, 13ರಲ್ಲಿ ಪತ್ತೆಯಾಗಿಲ್ಲ. ಇಂದು ಬಂದ ಎರಡೂ ವರದಿ ನೆಗೆಟೀವ್ ಆಗಿದೆ. ಇನ್ನೂ ಐದರ ವರದಿ ಬರಬೇಕಾಗಿದೆ ಎಂದರು.
ಇಂದು ಕೆಎಫ್‌ಡಿಯ ಲಕ್ಷಣವನ್ನು ಹೊಂದಿದ್ದ ಇಬ್ಬರ ರಕ್ತವನ್ನು ಪರೀಕ್ಷೆಗೊ ಳಪಡಿಸಲಾಗಿದೆ. ಕಿರುಮಂಜೇಶ್ವರದ ಒಬ್ಬರು ಚಿಕಿತ್ಸೆಗಾಗಿ ಕೆಎಂಸಿಗೆ ದಾಖಲಾಗಿದ್ದು, ಅವರ ರಕ್ತವನ್ನು ಕೆಎಫ್‌ಡಿ ಪರೀಕ್ಷೆಗೊಳಪಡಿಸಿದ್ದು ಅದು ನೆಗೆಟೀವ್ ಆಗಿದೆ. ಕೊಕ್ಕರ್ಣೆಯ ರೋಗಿಯೊಬ್ಬರು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಅವರ ರಕ್ತವನ್ನು ಇಂದು ಮಣಿಪಾಲಕ್ಕೆ ಕಳುಹಿಸಲಾಗಿದ್ದು ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದರು.ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ 11 ಮಂದಿಯ ರಕ್ತವನ್ನು ಪರೀಕ್ಷೆಗೊಳಪಡಿಸಿದ್ದು, ಇದರಲ್ಲಿ 10 ಮಂದಿಯಲ್ಲಿ ಕೆಎಫ್‌ಡಿ ವೈರಸ್ ಕಂಡುಬಂದಿಲ್ಲ. ಒಬ್ಬರ ವರದಿಗಾಗಿ ಕಾಯಲಾಗುತ್ತಿದೆ ಎಂದರು.
ಮಣಿಪಾಲದಲ್ಲಿ 24 ಮಂದಿಗೆ ಚಿಕಿತ್ಸೆ: ಸಾಗರ ಹಾಗೂ ಆಸುಪಾಸಿನ 128 ಮಂದಿ ಶಂಕಿತ ಮಂಗನ ಕಾಯಿಲೆ ಚಿಕಿತ್ಸೆಗೆ ಹಾಗೂ ನಾಲ್ವರು ಜ್ವರ ಮರಕಳಿಸಿದ್ದಕ್ಕೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ಪರೀಕ್ಷೆಯ ಬಳಿಕ ಇವರಲ್ಲಿ 53 ಮಂದಿಯಲ್ಲಿ ಮಂಗನ ಕಾಯಿಲೆ ಇರುವುದು ಪತ್ತೆಯಾಗಿದೆ. 77 ಮಂದಿಯಲ್ಲಿ ವೈರಸ್ ಪತ್ತೆಯಾಗಿಲ್ಲ. ಆದರೆ ಹೊಸನಗರ ದಿಂದ ಚಿಕಿತ್ಸೆಗೆ ಬಂದ ಇಬ್ಬರಲ್ಲಿ ಮಂಗನ ಕಾಯಿಲೆ ಬದಲು ಹಂದಿಜ್ವರ ಇರುವುದು ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತಿದ್ದಾರೆ ಎಂದು ಕೆಎಂಸಿಯ ಪ್ರಕಟಣೆ ತಿಳಿಸಿದೆ.
ಈಗಾಗಲೇ 106 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡಿ ದ್ದರೆ, 24 ಮಂದಿ ಈಗಲೂ ಚಿಕಿತ್ಸೆ ಪಡೆಯುತಿದ್ದಾರೆ. ಕೆಎಂಸಿಯಲ್ಲಿ ಸಾಗರದ ಓರ್ವ ಮಹಿಳೆ ಮಾತ್ರ ಈವರೆಗೆ ಮಂಗನಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.