×
Ad

ಪ್ರತಿಪಕ್ಷಗಳ ಮಹಾಘಟ್ ಬಂಧನ್ ಅನೈತಿಕ ಬಂಧನ್: ಉಡುಪಿಯಲ್ಲಿ ಜಿ.ಪುಟ್ಟಸ್ವಾಮಿ ಹೇಳಿಕೆ

Update: 2019-01-28 22:00 IST

ಉಡುಪಿ, ಜ.28: ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಏಕೈಕ ಅಜೆಂಡಾದೊಂದಿಗೆ ದೇಶದ ಎಲ್ಲಾ ವಿರೋಧಪಕ್ಷಗಳ ನಾಯಕರು ಹಾಗೂ ಪ್ರಾಂತೀಯ ಪಕ್ಷಗಳ ನಾಯಕರು ಸೇರಿ ರಚಿಸುವ ಮಹಾಘಟ್ ಬಂಧನ್, ನೀತಿ ನಿಯಮಗಳಿಲ್ಲದ ಅನೈತಿಕ ಬಂಧನ್ ಆಗಿದ್ದು, ಇದು ದೇಶದ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ದ ರಾಜ್ಯಾಧ್ಯಕ್ಷ ಜಿ.ಪುಟ್ಟಸ್ವಾಮಿ ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣಾ ತಯಾರಿಯ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಹಿಂದುಳಿದ ವರ್ಗಗಳ ಮೋರ್ಚಾದ ಸಂಘಟನೆಗಾಗಿ 14 ಜಿಲ್ಲೆಗಳ ಪ್ರವಾಸದಲ್ಲಿರುವ ಅವರು ಇಂದು ಉಡುಪಿಗೆ ಆಗಮಿಸಿ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತಿದ್ದರು.

ಈ ಅನೈತಿಕ ಬಂಧನ್ ದೇಶದ ಭವಿಷ್ಯಕ್ಕೆ ಮಾರಕವಾಗಿದ್ದು, ಇದರಿಂದ ದೇಶದ ಭದ್ರತೆ ಹಾಗೂ ಆರ್ಥಿಕ ಸುವ್ಯವಸ್ಥೆಗೆ ಮಾರಕ ಹೊಡೆತ ಬೀಳಲಿದೆ ಎಂದು ಅವರು ಹೇಳಿದರು. ದೇಶದ ಅಭಿವೃದ್ಧಿಗಾಗಿ ಕಳೆದ ನಾಲ್ಕೂವರೆ ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿರುವ ಮೋದಿ ಅವರನ್ನು ಸೋಲಿಸುವ ಏಕೈಕ ಗುರಿಯೊಂದಿಗೆ ಇವರೆಲ್ಲಾ ಒಟ್ಟಾಗುತಿದ್ದಾರೆ ಎಂದರು.

ಈಗ ಒಗ್ಗಟ್ಟಾಗಿರುವ ಪ್ರಾಂತೀಯ ನಾಯಕರಲ್ಲಿ ಯಾವುದೇ ಬದ್ಧತೆಗಳಿಲ್ಲ. ರಾಷ್ಟ್ರೀಯ ದೃಷ್ಟಿಕೋಶಗಳಿಲ್ಲ. ತಮ್ಮ ಚಟುವಟಿಕೆಗಳಿಗೆ ಅಡ್ಡಿಯಾಗಿರುವ ಮೋದಿಯನ್ನು ಸೋಲಿಸಲು ಇವರೆಲ್ಲ ಒಂದಾಗಿದ್ದಾರೆ. ಇದನ್ನು ದೇಶದ ಜನತೆ ಒಪ್ಪುವುದಿಲ್ಲ ಎಂದರು.

ಈ ಮೈತ್ರಿಯಿಂದ ದೇಶವನ್ನು ಕಾಪಾಡಲು ಸಾದ್ಯವಿಲ್ಲ. ಘಟಬಂಧನ್‌ದ ಪ್ರದಾನಿ ಅಭ್ಯರ್ಥಿ ಯಾರು ಎಂದು ಪ್ರಶ್ನಿಸಿದ ಪುಟ್ಟಸ್ವಾಮಿ, ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಾಂದರ್ಭಿಕ ಸಿಎಂ ಆಗಿದ್ದಾರೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್, ದೇವೇಗೌಡರಿಗೆ ಶರಣಾಗಿದೆ. ಜೆಡಿಎಸ್ ಕೇವಲ ಎರಡು ಸೀಟು ಗೆದ್ದರೂ, ಈ ಬಾರಿ 10 ಸೀಟು ಪಡೆದುಕೊಳ್ಳಲು ಯಶಸ್ವಿಯಾಗುತ್ತಾರೆ. ಸಿಎಂ ರಾಜ್ಯದ ರೈತರ ತುಟಿಗೆ ತುಪ್ಪ ಸವರುವ ಕೆಲಸ ಮಾಡುತಿದ್ದಾರೆ ಎಂದರು.

ಪ್ರಿಯಾಂಕ ಗಾಂಧಿಯ ರಾಜಕೀಯ ಪ್ರವೇಶದಿಂದ ಏನೂ ಬದಲಾವಣೆ ಯಾಗದು.ಕಾಂಗ್ರೆಸ್‌ನಲ್ಲಿ ಒಂದು ಕುಟುಂಬ ಬಿಟ್ಟು ಬೇರೆಯವರಿಗೆ ಅವಕಾಶ ಗಳಿಲ್ಲ. ಪ್ರಿಯಾಂಕರ ಪತಿ ರಾಬರ್ಟ್ ವಾದ್ರಾ ವಿರುದ್ಧ ಸಾಕಷ್ಟು ಕೇಸುಗಳಿವೆ. ಅದರಿಂದ ಅವರು ಪಾರಾಗುವುದು ಕಷ್ಟ. ಪ್ರಿಯಾಂಕರಿಂದ ಬಿಜೆಪಿಗೆ ಯಾವುದೇ ಪರಿಣಾಮಗಳಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಹಿಂದುಳಿದ ಮೋರ್ಚಾದ ನಾಯಕರಾದ ಕಿರಣ್‌ಕುಮಾರ್, ನವೀನ್ ಭಂಡಾರಿ, ಸೋಮಶೇಖರ್, ತಿಪ್ಪೆಸ್ವಾಮಿ, ಗಣೇಶ್ ಉದ್ಯಾವರ, ರತ್ನಾಕರ ಬಿ.ಎಸ್. ಅರುಣ್ ಭಂಡಾರಿ, ದಿನೇಶ್ ಎರ್ಮಾಳ್ ಹಾಗೂ ಶ್ರೀಧರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News