ನಾನು ಹಿಂದೂ ರಾಷ್ಟ್ರವಾದಿ ಎಂದು ಆರೋಪಿಸಲಾಗುತ್ತಿದೆ: ತುಳಸಿ ಗಬ್ಬಾರ್ಡ್
ವಾಶಿಂಗ್ಟನ್,ಜ.28 : ತಾನು ‘‘ಧಾರ್ಮಿಕ ಅಸಹಿಷ್ಣುತೆ’’ ಬಲಿಪಶುವಾಗಿದ್ದೇನೆಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಲು ಬಯಸಿರುವ ತುಳಸಿ ಗಬ್ಬಾರ್ಡ್ ಆರೋಪಿಸಿದ್ದಾರೆ . ಕೆಲವು ಮಾಧ್ಯಮಸಂಸ್ಥೆಗಳು ತನ್ನ ಮೇಲೆ ಗುರಿಯಿರಿಸಿವೆ ಹಾಗೂ ಹಿಂದೂ ಹೆಸರಿರುವ ತನ್ನ ಕೆಲವು ಬೆಂಬಲಿಗರನ್ನು ಹಿಂದೂ ರಾಷ್ಟ್ರವಾದಿಗಳೆಂದು ಆರೋಪಿಸುತ್ತಿವೆಯೆಂದು ಎಂದಾಕೆ ದೂರಿದ್ದಾರೆ.
ತುಳಸಿ ಗಬ್ಬಾರ್ಡ್ ಅವರು ರವಿವಾರ ‘ರಿಲಿಜಿಯಸ್ ನ್ಯೂಸ್ ಸರ್ವಿಸಸ್’ ಪತ್ರಿಕೆಗೆ ಬರೆದ ಲೇಖನವೊಂದರಲ್ಲಿ ತನ್ನ ಹಾಗೂ ತನ್ನ ಬೆಂಬಲಿಗರು ಮತ್ತು ತನಗೆ ದೇಣಿಗೆ ನೀಡುವವರ ವಿರುದ್ಧ ನಡೆಯುತ್ತಿರುವ ಅಭಿಯಾನವು ಹಿಂದೂ ಅಮೆರಿಕನ್ನರನ್ನು ಕೆಟ್ಟದಾಗಿ ಬಿಂಬಿಸುವ ಹಾಗೂ ಹಿಂದೂ ಅಮೆರಿಕನ್ನರ ವಿರುದ್ಧ ಗುರಿಯಿಡುವ ಉದ್ದೇಶವನ್ನು ಹೊಂದಿದೆ’’ ಎಂದು ಹೇಳಿದ್ದಾರೆ,.
ತುಳಸಿ ಅವರು ಅಮೆರಿಕದ ಕಾಂಗ್ರೆಸ್‌ಗೆ ಆಯ್ಕೆಯಾದ ಪ್ರಪ್ರಥಮ ಹಿಂದೂ ಧರ್ಮೀಯರೆನಿಸಿಕೊಂಡಿದ್ದಾರೆ. 2020ರ ಅಮೆರಿಕ ಅಧ್ಯಕ್ಷ ಚುನಾವಣೆಗೆ ತಾನು ಸ್ಪರ್ಧಿಸುವುದಾಗಿಯೂ ಆಕೆ ತನ್ನ ಲೇಖನದಲ್ಲಿ ಪುನರುಚ್ಚರಿಸಿದ್ದಾರೆ. ತಾನೋರ್ವ ಹಿಂದುತ್ವವಾದಿಯೆಂಬ ಆರೋಪಗಳ ಬಗ್ಗೆ ತನ್ನ ಲೇಖನದಲ್ಲಿ ಗಮನಸೆಳೆದಿರುವ ಅವರು, ‘ನಾಳೆ ಮುಸ್ಲಿಮ್ ಅಥವಾ ಯೆಹೂದಿ ಅಮೆರಿಕನ್ನರಿಗೂ ಇದೇ ಪರಿಸ್ಥಿತಿ ಬರಬಹುದು. ಜಪಾನಿ, ಹಿಸ್ಪಾನಿಕ್ ಅಥವಾ ಆಫ್ರಿಕನ್ ಅಮೆರಿಕನ್ನರಿಗೂ ಇದೇ ಗತಿ ಎದುರಾಗಬಹುದಲ್ಲವೇ?” ಎಂದು ಆಕೆ ಪ್ರಶ್ನಿಸಿದ್ದಾರೆ.
‘‘ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ನನ್ನ ಭೇಟಿಯನ್ನು ತಾನೋರ್ವ ಹಿಂದುತ್ವವಾದಿಯೆಂಬಬ ಆರೋಪಕ್ಕೆ ಪುರಾವೆಯಾಗಿ ಉಲ್ಲೇಖಿಸಲಾಗುತ್ತದೆ. ಮೋದಿ ಅವರು ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಬರಾಕ್ ಒಬಾಮಾ, ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಹಾಗೂ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕ ಕಾಂಗ್ರೆಸ್‌ನಲ್ಲಿರುವ ನನ್ನ ಹಲವಾರು ಸಹೋದ್ಯೋಗಿಗಳು ಅವರನ್ನು ಕೂಡಾ ಭೇಟಿಯಾಗಿ , ಮಾತುಕತೆ ನಡೆಸಿದ್ದರು’’ ಎಂದು ತುಳಸಿ ಲೇಖನದಲ್ಲಿ ವಿವರಿಸಿದ್ದಾರೆ. ‘‘ಅಮೆರಿಕ ಕಾಂಗ್ರೆಸ್‌ಗೆ ಆಯ್ಕೆಯಾಗಿರುವ ಹಾಗೂ ಇದೀಗ ಇದೇ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲಿರುವ ಪ್ರಥಮ ಹಿಂದೂ-ಅಮೆರಿಕನ್ ನಾನಾಗಿರುವುದಕ್ಕೆ ಹೆಮ್ಮೆಯಿದೆ’’ ಎಂದು ತುಳಸಿ ಹೇಳಿದ್ದಾರೆ.
‘‘ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ತನ್ನ ಘೋಷಣೆಯನ್ನು ಹೆಡ್‌ಲೈನ್ ಸುದ್ದಿಗಳಾಗಿ ಪ್ರಕಟಿಸಿದ ಸುದ್ದಿಪತ್ರಿಕೆಗಳು ಈ ಐತಿಹಾಸಿಕ ಪ್ರಥಮವನ್ನು ಸಂಭ್ರಮದಿಂದ ಆಚರಿಸಬೇಕಿತ್ತು. ಆದರೆ ಅವು ಸುಶಿಕ್ಷಿತ ಅಮೆರಿಕನ್ನರು ಕೂಡಾ ವಿಶ್ವದ ಮೂರನೆ ಅತಿ ದೊಡ್ಡಧರ್ಮವಾದ ಹಿಂದೂ ಧರ್ಮವನ್ನು ಸಂದೇಹದಿಂದ ನೋಡುವಂತಹ ಪರಿಸ್ಥಿತಿಯುನ್ನು ಉಂಟು ಮಾಡಿವೆ. ನನ್ನ ವಿರುದ್ಧ ಮಾತ್ರವಲ್ಲ, ನನ್ನ ಬೆಂಬಲಿಗರ ವಿರುದ್ಧವೂ ಸಂದೇಹ, ಭಯ ಹಾಗೂ ಧಾರ್ಮಿಕ ಅಸಹಿಷ್ಣುತೆಯೊಂದಿಗೆ ನೋಡುವಂತೆ ಮಾಡಿವೆ’’ ಎಂದು ಗಬ್ಬಾರ್ಡ್ ಆರೋಪಿಸಿದ್ದಾರೆ.
ಏಶ್ಯಾದಲ್ಲಿ ಭಾರತವು ಅಮೆರಿಕದ ಪ್ರಮುಖ ಮಿತ್ರರಾಷ್ಟ್ರಗಳಲ್ಲಿ ಒಂದಾಗಿದೆ ಹಾಗೂ ಜಗತ್ತಿನ ಮಹತ್ವದ ಪ್ರಾಂತದಲ್ಲಿ ಅದರ ಪ್ರಾಮುಖ್ಯತೆಯು ಬೆಳೆಯುತ್ತಿದೆಯೆಂದು ತುಳಸಿ ಗಬ್ಬಾರ್ಡ್ ತನ್ನ ಲೇಖನದಲ್ಲಿ ಅಭಿಪ್ರಾಯಿಸಿದ್ದಾರೆ.