ಟೋಲ್‍ ವಿನಾಯಿತಿ: ನವಯುಗ ನಿರಾಕರಣೆ

Update: 2019-01-28 17:43 GMT

ಪಡುಬಿದ್ರಿ, ಜ. 28: ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್‍ ವಿನಾಯಿತಿ ನೀಡುವ ಬಗ್ಗೆ ಚರ್ಚಿಸಲು ಸೋಮವಾರ ಕರೆದ ಸಭೆಯಲ್ಲಿ ನವಯುಗ ಕಂಪೆನಿ ನಿರಾಕರಿಸಿದ್ದು, ಇದರಿಂದ ಸಭೆ ವಿಫಲಗೊಂಡಿತು.

ಹೆಜಮಾಡಿ ಟೋಲ್‍ಗೇಟ್‍ನಲ್ಲಿ 21 ದಿನಗಳಿಂದ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ ಪಡುಬಿದ್ರಿಯಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿಯಿಂದ ಸಭೆಯನ್ನು ಜಿಲ್ಲಾಧಿಕಾರಿ ಕರೆದಿದ್ದರು.

ಕಾಮಗಾರಿ ಪೂರ್ಣಗೊಳ್ಳುವವರೆಗೆ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯವರಿಗೆ ಹೆಜಮಾಡಿ ಟೋಲ್‍ಗೇಟ್‍ನಲ್ಲಿ ಟೋಲ್‍ನಲ್ಲಿ ಶುಲ್ಕ ವಿನಾಯಿತಿ ನೀಡಬೇಕು. ನಡೆದಿರುವ ಕಾಮಗಾರಿ ಅಸಮರ್ಪಕವಾಗಿದೆ. ಅಪಘಾತಗಳು ಹೆಚ್ಚುತ್ತಿವೆ. ಕುಡಿಯುವ ನೀರಿನ ಪೈಪ್‍ಲೈನ್‍ಗಳಿಗೆ ಹಾನಿಯಾಗಿದೆ. ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ದಾರಿದೀಪ, ಬಸ್ ನಿಲ್ದಾಣ ವ್ಯವಸ್ಥೆಯನ್ನು ಕೂಡ ಸರಿಯಾಗಿ ಮಾಡಿಲ್ಲ. ಮೂಲ ಯೋಜನೆಯನ್ನು ಕಾರ್ಯಗತಗೊಳಿಸದೆ ಅವೈಜ್ಞಾನಿಕವಾಗಿ ಕೆಲಸ ನಡೆಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದರು.

ಶಾಸಕ ಲಾಲಾಜಿ ಮೆಂಡನ್ ಪಡುಬಿದ್ರಿಯಲ್ಲಿ ಕಾಮಗಾರಿಗಳು ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸುಂಕ ವಿನಾಯಿತಿಯನ್ನು ನೀಡಲು ಜಿಲ್ಲಾಧಿಕಾರಿಗಳ ಸಮಕ್ಷಮ ನವಯುಗ ಅಧಿಕಾರಿಗಳನ್ನು ಒತ್ತಾಯಿಸಿದರು. ಆದರೆ ಸಭೆಯಲ್ಲಿ ಹಾಜರಿದ್ದ ನವಯುಗ ಕಂಪೆನಿಯ ಪ್ರತಿನಿಧಿಗಳು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕವೂ ಟೋಲ್‍ವಿನಾಯಿತಿಗೆ ನಿರಾಕರಿಸಿದರು. ನವಯುಗ ಅಧಿಕಾರಿಗಳಾದ ಗೌರಿಶಂಕರ್, ಶಂಕರ್ ರಾವ್, ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ರಾಜ್ಯ ಸಂಚಾಲಕ ಪ್ರಸನ್ನ ಕುಮಾರ್ ಶೆಟ್ಟಿ ಹೆಬ್ರಿ, ಪಡುಬಿದ್ರಿ ನಾಗರಿಕ ಸಮಿತಿ ಅಧ್ಯಕ್ಷ ನವೀನ್‍ಚಂದ್ರ ಶೆಟ್ಟಿ,  ಟೋಲ್‍ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ಗುಲಾಂ ಮಹಮ್ಮದ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ದಸಂಸ ಮುಖಂಡ ಲೋಕೇಶ್ ಕಂಚಿನಡ್ಕ, ಕರವೇ ತಾಲೂಕು ಅಧ್ಯಕ್ಷ ಸಯ್ಯದ್ ನಿಝಾಮುದ್ದೀನ್, ಆಸೀಫ್ ಆಪದ್ಬಾಂಧವ, ಮುಧು ಆಚಾರ್ಯ, ಹರೀಶ್ ಪುತ್ರನ್, ರಮೀಝ್ ಹುಸೈನ್ ಹಾಜರಿದ್ದರು. 

ಡಿಸಿ ಭೇಟಿ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 66 ಪಡುಬಿದ್ರಿಯ ಅಪೂರ್ಣ ಕಾಮಗಾರಿಗಳನ್ನು ವೀಕ್ಷಿಸಲು ಜಿಲ್ಲಾಡಳಿತವು ನವಯುಗ ಹಾಗೂ ಹೆದ್ದಾರಿ ಪ್ರಾಧಿಕಾರಿಗಳೊಂದಿಗೆ ಪಡುಬಿದ್ರಿಗೆ ಮಂಗಳವಾರ ಆಗಮಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News