×
Ad

ಜ. 29ರಿಂದ ದ.ಕ. ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನ

Update: 2019-01-28 23:41 IST

ಮಂಗಳೂರು, ಜ. 28: ದ.ಕ. ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಂಗಳೂರು ನಗರ ಸೇರಿದಂತೆ ಇಡೀ ಜಿಲ್ಲೆಯಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ‘ವ್ಯಸನ ಮುಕ್ತ ಬದುಕು-ಸ್ವಸ್ಥ ಸಮಾಜ’ಎಂಬ ಆಶಯದೊಂದಿಗೆ ಜ.29, 30, 31ರಂದು ಮೂರು ದಿನಗಳ ಕಾಲ ಮಂಗಳೂರು ಪುರಭವನದಲ್ಲಿ ನಡೆಯಲಿದೆ.

ದ.ಕ. ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನವು ‘ವ್ಯಸನ ಮುಕ್ತ ಬದುಕು-ಸ್ವಸ್ಥ ಸಮಾಜ’ಎಂಬ ಆಶಯದೊಂದಿಗೆ ಜ.29, 30, 31ರಂದು ಮೂರು ದಿನಗಳ ಕಾಲ ಮಂಗಳೂರು ಪುರಭವನದಲ್ಲಿ ನಡೆಯಲಿದೆ.

ಡಾ.ವಿರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಕುದ್ಮುಲ್ ರಂಗರಾವ್ ಸಭಾಂಗಣ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಾಂಗಣ, ಬಿ.ಎಂ. ಇದಿನಬ್ಬ ವೇದಿಕೆಯಲ್ಲಿ ಮೂರು ದಿನಗಳ ಕಾಲ ಸಮ್ಮೇಳನ ಸಂಪನ್ನಗೊಳ್ಳಲಿದೆ.

ಸಂಸ್ಕೃತದಲ್ಲಿ ಅಡಕವಾದ ವೇದ ಪುರಾಣಗಳ ಜ್ಞಾನವನ್ನು ಹರಿದಾಸರು, ಶರಣರು, ಸರಳ ಕನ್ನಡದಲ್ಲಿ ಜನ ಮಾನಸಕ್ಕೆ ಬಿಂಬಿಸಿದಂತೆ ಇಂಗ್ಲೀಷ್ ಸಂಸ್ಕೃತ ಭಾಷೆಗಳಲ್ಲಿ ಅಡಕವಾದ ವೈದ್ಯಕೀಯ ಜ್ಞಾನವನ್ನು ಕನ್ನಡ ಪುಸ್ತಕಗಳು, ಉಪನ್ಯಾಸಗಳು, ತಮ್ಮ ಅಂಕಣ ಬರಹಗಳು ಮತ್ತು ವಿದ್ಯುನ್ಮಾನ, ದೃಶ್ಯ ಮಾಧ್ಯಮಗಳ ಮೂಲಕ ಬೋಧಿಸಿದ ಮಹಾನ್ ಸಾಧಕ, ಮಾಹೆ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ, ವಿಶ್ವದಾದ್ಯಂತ ಅನೇಕ ವಿಶ್ವವಿದ್ಯಾನಿಲಯಗಳ ಸಂದರ್ಶನ ಉಪನ್ಯಾಸಕರಾಗಿ, ವೈದ್ಯಕೀಯ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ ಡಾ.ಬಿ.ಎಂ. ಹೆಗ್ಡೆಯವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನವು ಜರಗಲಿದೆ.

ಧ್ವಜಾರೋಹಣ:

ಸಮ್ಮೇಳನದ ಸಭಾಂಗಣದ ಮುಂಭಾಗ ರಾಷ್ಟ್ರಧ್ವಜಾರೋಹಣವನ್ನು ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹಾಗೂ ಪರಿಷತ್‌ನ ಧ್ವಜಾರೋಹಣವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ಸಮ್ಮೇಳನದ ಧ್ವಜಾರೋಹಣವನ್ನು ಮನಾಪ ಮೇಯರ್ ಭಾಸ್ಕರ್ ಕೆ. ನೆರವೇರಿಸಲಿದ್ದಾರೆ.

ಕನ್ನಡ ಭುವನೇಶ್ವರಿಯ ದಿಬ್ಬಣ

ಜ.29ರಂದು ಸಂಜೆ 3ಗಂಟೆಗೆ ಮಂಗಳೂರು ಬಂಟ್ಸ್ ಹಾಸ್ಟೆಲ್ ಆವರಣದಿಂದ ಅಂಬೇಡ್ಕರ್ (ಜ್ಯೋತಿ) ವೃತ್ತ, ಡಾ.ಕೋಟ ಶಿವರಾಮ ಕಾರಂತ ಮಾರ್ಗ, ಉಳ್ಳಾಲ ಪದ್ಮನಾಭ ಮಲ್ಯ (ಯು. ಪಿ. ಮಲ್ಯ) ರಸ್ತೆ ಮೂಲಕ ಕುದ್ಮುಲ್ ರಂಗರಾವ್ ಪುರಭವನ (ಟೌನ್ ಹಾಲ್) ಮಂಗಳೂರುವರೆಗೆ ವೈಶಿಷ್ಟ ಪೂರ್ಣವಾದ ಸಾಂಸ್ಕತಿಕ ಮೆರವಣಿಗೆ ಹಮ್ಮಿಕೊಳ್ಳಳಾಗಿದೆ.

ಮೆರವಣಿಗೆಯನ್ನು ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಲಿದ್ದಾರೆ. ಲಕ್ಷ್ಮೀ ನಾರಾಯಣ ಆಸ್ರಣ್ಣ ಕಟೀಲು ದೀಪ ಪ್ರಜ್ವಲನೆಗೊಳಿಸುವರು. ಮಾಜಿ ಸಚಿವ ಕೆ. ಅಮರ್‌ನಾಥ ಶೆಟ್ಟಿ ಭುವನೇಶ್ವರಿಗೆ ಪುಷ್ಪಾರ್ಚನೆ ಗೈಯುವರು.

ಸಾಂಸ್ಕೃತಿಕ ತಂಡಗಳಿಗೆ ಶರವು ರಾಘವೇಂದ್ರ ಶಾಸ್ತ್ರಿ ಚಾಲನೆ ನೀಡಲಿದ್ದು, ಕದ್ರಿ ಮಂಜುನಾಥ ದೇವಸ್ಥಾನದ ವಿಠಲದಾಸ ತಂತ್ರಿ, ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭ

ಕುದ್ಮುಲ್ ರಂಗರಾವ್ ಸಭಾಂಗಣ, ಬಿ.ಎಂ. ಇದಿನಬ್ಬ ವೇದಿಕೆಯಲ್ಲಿ ಜರಗಲಿರುವ 23ನೇ ದ.ಕ. ಜಿಲ್ಲಾ ಸಮ್ಮೇಳನವನ್ನು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀ, ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಪೀಟರ್ ಪೌಲ್ ಸಲ್ಡಾನ ಹಾಗೂ ಮಂಗಳೂರು ಧರ್ಮಪ್ರಾಂತದ ಖಾಝಿ ಮೌಲಾನ ತ್ವಾಕ ಅಹ್ಮದ್ ಮುಸ್ಲಿಯಾರ್ ದಿವ್ಯ ಉಪಸ್ಥಿತಿಯಲ್ಲಿ ನಾಡಿನ ಪ್ರಸಿದ್ಧ ಸಾಹಿತಿ ಡಾ.ನಾ. ಡಿಸೋಜ ಉದ್ಘಾಟಿಸುವರು.

ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ದೀಪ ಪ್ರಜ್ವಲನೆಗೈಯಲಿದ್ದಾರೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಡಿ. ವೇದವ್ಯಾಸ ಕಾಮತ್ ವಹಿಸಲಿರುವರು. ಶಾಸಕ ಉಮಾನಾಥ ಕೋಟ್ಯಾನ್ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸುವರು. ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಪಾರಂಪರಿಕ ಪ್ರದರ್ಶನಗಳನ್ನು ಉದ್ಘಾಟಿಸುವರು.

ಕಲೈಮಾಮಣಿ ಡಾ.ಕದ್ರಿ ಗೋಪಾಲನಾಥ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ವಸ್ತು ಪ್ರದರ್ಶನವನ್ನು, ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್‌ಕುಮಾರ್ ಕಟೀಲ್ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.

ಊಟದೊಂದಿಗೆ ಊಡುಗೊರೆ ಆಯ್ದ ಕವನ ಸಂಕಲನವನ್ನು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಡಳಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಬಿಡುಗಡೆ ಮಾಡಲಿರುವರು. ಚಿತ್ರ ಕಲಾ, ರಂಗೋಲಿ ಪ್ರದರ್ಶನಗಳನ್ನು ಶಾಸಕ ಡಾ.ಭರತ್ ಶೆಟ್ಟಿ ವೈ. ಉದ್ಘಾಟಿಸಲಿದ್ದಾರೆ. ಸ್ಮರಣ ಸಂಚಿಕೆಯನ್ನು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಬಿಡುಗಡೆ ಮಾಡಲಿರುವರು.

ಎ.ಜೆ. ಸಮೂಹ ಸಂಸ್ಥೆಗಳು ಅಧ್ಯಕ್ಷ ಎ.ಜೆ. ಶೆಟ್ಟಿ, ಮಾಜಿ ಶಾಸಕ ಜೆ.ಆರ್. ಲೋಬೋ, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಕೊಂಕಣಿ ಭಾಷಾ ಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಕರ್ನಾಟಕ ತುಳು ಸಾಹಿತ್ಯ ಆಕಾಡಮಿ ಅಧ್ಯಕ್ಷ ಎ.ಸಿ. ಭಂಡಾರಿ, ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ದಿನಕರ ಉಳ್ಳಾಲ ಮತ್ತಿತರರು ಭಾಗವಹಿಸಲಿದ್ದಾರೆ.

ವಿದ್ವತ್ ಸಂಮಾನ: ವೇದಮೂರ್ತಿ ಪಿ.ಗಣಪತಿ ಆಚಾರ್ಯ, ಕದ್ರಿ, (ವೇದ ವಿದ್ವಾಂಸರು), ವಂ.ಡಾ.ಲಿಯೋ ಡಿಸೋಜ ಎಸ್. ಜೆ. (ವಿಜ್ಞಾನ), ಪ್ರೊ. ಸುರೇಂದ್ರ ರಾವ್ ಬಿ. (ಸಂಶೋಧನೆ), ಪ್ರೊ. ಬಿ.ಎಂ. ಇಚ್ಲಂಗೋಡು (ಭಾಷೆ, ಸಾಹಿತ್ಯ) , ಡಾ. ಕೆ.ವಿ. ರಾವ್ (ವಿಜ್ಞಾನ ಪ್ರಸರಣ), ವಿದ್ವಾನ್ ಡಿ. ಶಂಕರ ಭಟ್ ಪೂತ್ತೂರು (ಸಾಹಿತ್ಯ), ನಾಗೇಶ್ ಎ. ಬಪ್ಪನಾಡು, ಮೂಲ್ಕಿ (ವಾದ್ಯಸಂಗೀತ), ವೇದಮೂರ್ತಿ ಮೊಗರ್ನಾಡು ಜನಾರ್ದನ ಭಟ್, ನರಿಕೊಂಬು (ಧಾರ್ಮಿಕ, ಶಿಕ್ಷಣ), ವಾಮಯ್ಯ ಉದ್ಯಾವರ, ಮಾಡ (ಜನಪದ), ಬೊಟ್ಟಿಕೆರೆ ಪುರುಷೋತ್ತಮ ಪೂಂಜ (ಪ್ರಸಂಗ ಸಾಹಿತ್ಯ) ವಿಠ್ಠಲ ರಾಮಮೂರ್ತಿ ಉಜಿರೆ (ವಾದ್ಯಸಂಗೀತ), ವಿದ್ವಾನ್ ಎಂ. ನಾರಾಯಣ ಸುರತ್ಕಲ್, (ಶಾಸ್ತ್ರೀಯ ಸಂಗೀತ ), ಶ್ರೀಮತಿ ಭವಾನಿ ಪೆರ್ಗಡೆ (ಜನಪದ).

ಕನ್ನಡ ಸಿರಿ: ಅರುವ ಕೊರಗಪ್ಪ ಶೆಟ್ಟಿ, ಬೆಳ್ತಂಗಡಿ (ಯಕ್ಷಗಾನ), ಧನಕೀರ್ತಿ ಬಲಿಪ ಮೂಡಬಿದ್ರಿ (ಕೃಷಿ) ಪಟ್ಲ ಸತೀಶ್ ಶೆಟ್ಟಿ, (ಯಕ್ಷಗಾನ ಪ್ರಸರಣ), ಮನೋಹರ ಪ್ರಸಾದ್, ಮಂಗಳೂರು (ಪತ್ರಿಕಾ ಮಾಧ್ಯಮ), ಚಂದ್ರಶೇಖರ್ ಎಂ. ಮೂಡಬಿದಿರೆ (ಸಹಕಾರಿ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಖ್ಯಾತ ಹಾಸ್ಯಕವಿ ಎಚ್. ಡುಂಡಿರಾಜ್ ಅವರು ಸಾಹಿತ್ಯ-ಬದುಕು-ಹಾಸ್ಯ ಎನ್ನುವ ವಿಷಯದ ಕುರಿತು ಮಾತನಾಡಲಿರುವರು.
7:30ರಿಂದ ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ 7:30ರಿಂದ 8:30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, ‘ಯಕ್ಷ ಮಾಧುರ್ಯ’ ಮಹಿಳಾ ಯಕ್ಷಗಾನ ತಾಳಮದ್ದಳೆ ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಮಂಗಳೂರು ಸದಸ್ಯರಿಂದ ಹಾಗೂ 8:30ರಿಂದ 9:30ರಿಂದ ಯಕ್ಷನಾಟಕ ‘ಸಿರಿಸಂಪಿಗೆ’ ಪ್ರಸ್ತುತಿ:  ಕಲಾಗ್ರಾಮ ಕಲ್ಮಡ್ಕ ಬಳಗ ಸುಳ್ಯ. ಸಾಹಿತ್ಯ: ಡಾ ಚಂದ್ರಶೇಖರ ಕಂಬಾರ. ನಿರ್ದೇಶನ: ಸಾಯಿನಾರಾಯಣ ಕಲ್ಮಡ್ಕ.

ಸಮ್ಮೇಳನ: ಅಧ್ಯಾಪಕರಿಗೆ ಒಒಡಿ ಸೌಲಭ್ಯ

ಮಂಗಳೂರು, ಜ.28: ಮಂಗಳೂರು ಪುರಭವನದಲ್ಲಿ ಜ.29, 30, 31 ರಂದು ಜರಗಲಿರುವ ದ.ಕ. ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ದ.ಕ. ಜಿಲ್ಲೆಯ ಎಲ್ಲ ಸರಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳ ಉಪನ್ಯಾಸಕರಿಗೆ ಅನ್ಯಕಾರ್ಯ ನಿಮಿತ್ತ ರಜೆ ಸೌಲಭ್ಯ (ಒಒಡಿ) ಮಂಜೂರು ಮಾಡಲಾಗಿದೆ. ಈ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News