ತಲಪಾಡಿ: ಗ್ಯಾಸ್ ಟ್ಯಾಂಕರ್ ಕ್ಯಾಬಿನ್‍ನಲ್ಲಿ ಬೆಂಕಿ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
ಉಳ್ಳಾಲ,ಜ.30: ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ನ ಚಾಲನಾ ಕ್ಯಾಬಿನ್‍ನಲ್ಲಿ ಬೆಂಕಿಹತ್ತಿಕೊಂಡು ಬಳಿಕ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿದ ಘಟನೆ ತಲಪಾಡಿ ಸಮೀಪದ ಕೆ.ಸಿ.ರೋಡ್ ಬಳಿ ನಡೆದಿದೆ.
ಮಂಗಳೂರಿನ ಎಂಆರ್ ಪಿಎಲ್‍ನಿಂದ ಕೇರಳದ ಕೊಯಂಬತ್ತೂರಿಗೆ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ನ ಮುಂಭಾಗದ ಕ್ಯಾಬಿನ್‍ನಲ್ಲಿ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಹತ್ತಿಕೊಂಡಿದೆ. ರಸ್ತೆಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರು ಬೆಂಕಿ ಕಂಡು ಚಾಲಕನಿಗೆ ತಿಳಿಸಿದ್ದು, ತಕ್ಷಣ ಜಾಗೃತನಾದ ಟ್ಯಾಂಕರ್ ಚಾಲಕ ಕೃಷ್ಣಮೂರ್ತಿ ಚಾಲನೆಯಲ್ಲಿರುವಾಗಲೇ ಬೆಂಕಿಯನ್ನು ನಂದಿಸಿ ಬಳಿಕ ಲಾರಿಯನ್ನು ರಸ್ತೆ ಬದಿಗೆ ಬಂದು ನಿಲ್ಲಿಸಿದ್ದಾರೆ. ಅಲ್ಲದೆ ಕೂಡಲೇ ಕ್ಯಾಬಿನ್ ಒಳಗಿದ್ದ ಅಡುಗೆ ತಯಾರಿಯ ಗ್ಯಾಸ್ ಸಿಲಿಂಡರನ್ನು ಹೊರಗಡೆ ಎಸೆದು ಸಮಯ ಪ್ರಜ್ಞೆ ಮೆರೆದಿದ್ದಾರೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಗಳೂ ಸ್ಥಳಕ್ಕೆ ಆಗಮಿಸಿದ್ದು, ಆ ವೇಳೆಗಾಗಲೇ ಬೆಂಕಿ ಸಂಪೂರ್ಣವಾಗಿ ನಂದಿದೆ ಎನ್ನಲಾಗಿದೆ.