×
Ad

ಬಂಟ್ವಾಳದ ಸಿಪಿಐ ಕಚೇರಿ, ಎ.ಶಾಂತಾರಾಂ ಪೈ ಸ್ಮಾರಕ ಭವನ ಮರು ಉದ್ಫಾಟನೆ

Update: 2019-01-30 18:35 IST

ಆರೆಸ್ಸೆಸ್‍ನ ಫ್ಯಾಶಿಸಂ ವಾದ ದೇಶದ ಪ್ರಜಾಫ್ರಭುತ್ವಕ್ಕೆ ಅಪಾಯ: ಬಿನೊಯ್ ವಿಶ್ವಂ 

ಬಂಟ್ವಾಳ, ಜ. 30: 'ಇಟಲಿ, ಜರ್ಮನಿಯ ಫ್ಯಾಶಿಸಂ ಸಿದ್ಧಾಂತವನ್ನು ಮೈಗೂಡಿಸಿಕೊಂಡು ದೇಶದಲ್ಲಿ ಬಲವಾಗಿ ಜಾರಿ ಮಾಡಲು ಹೊರಟಿರುವ ಆರೆಸ್ಸೆಸ್ ನೇತೃತ್ವದ ಬಿಜೆಪಿಯು ಜಾತ್ಯತೀತ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ' ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ, ಕೇರಳದ ರಾಜ್ಯ ಸಭಾ ಸದಸ್ಯ ಬಿನೊಯ್ ವಿಶ್ವಂ ಹೇಳಿದ್ದಾರೆ.

ದುಷ್ಕರ್ಮಿಗಳಿಂದ ಹಾನಿಗೀಡಾದ ಬಂಟ್ವಾಳದ ಸಿಪಿಐ ಪಕ್ಷದ ಕಚೇರಿ ಎ.ಶಾಂತಾರಾಂ ಪೈ ಸ್ಮಾರಕ ಭವನವನ್ನು ಬುಧವಾರ ಮರು ಉದ್ಫಾಟಿಸಿ, ಬಳಿಕ ಬಂಟ್ವಾಳ ಚಲೋ ಕಾರ್ಯಕ್ರಮದಡಿ ಪ್ರತಿಭಟನಾ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡುತ್ತಿದ್ದರು. 

ಆರೆಸ್ಸೆಸ್‍ಗೆ ಸಿದ್ಧಾಂತ ಎಂಬುವುದೇ ಇಲ್ಲ. ಇಟಲಿ, ಜರ್ಮನ್‍ನಲ್ಲಿದ್ದ ಜನಾಂಗೀಯ ದ್ವೇಷ ಸಿದ್ಧಾಂತವನ್ನು ಆಮದು ಮಾಡಿಕೊಂಡಿದೆ. ಅಲ್ಲಿನ ಜನಾಂಗೀಯ ದ್ವೇಷದ ಸಂಸ್ಕೃತಿಯನ್ನು ದೇಶದ ಮೇಲೆ ಹೇರಲಾಗುತ್ತಿದೆ. ಆರೆಸ್ಸೆಸ್ ಸೈದ್ಧಾಂತಿಕವಾಗಿ ಎದುರಿಸಲು ಸಾಧ್ಯವಾಗದೇ ಬಾಂಬ್, ಶಸ್ತ್ರಾಸ್ತ್ರಗಳ ಮೂಲಕ ದಾಳಿ ಮಾಡುತ್ತಿದೆ ಎಂದು ಕಿಡಿಕಾರಿದರು. ಗೌರಿ, ಪನ್ಸಾರೆ, ದಾಭೋಲ್ಕರ್, ಕಲ್ಬುರ್ಗಿ ಸಹಿತ ಇತರ ವಿಚಾರವಾದಿಗಳ ಕೊಲೆಗೆಡಕರು ನೀವು. ತಾಕತ್ತಿದ್ದರೆ ನಮ್ಮನ್ನು ಸೈದ್ಧಾಂತಿಕವಾಗಿ ಸೋಲಿಸಿ, ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.

ಗೋಡ್ಸೆಯ ಸಂತತಿಗಳು ನೀವು. ಸಾಮಾಜಿಕ ಹೋರಾಟದ ಸಂಗಾತಿಗಳು. ನಾವು ನಿಮ್ಮಿಂದ ದೇಶ ಪ್ರೇಮ ಕಲಿಯಬೇಕಾಗಿಲ್ಲ. ನಿಮ್ಮ ಹಿಂದುತ್ವ, ನಕಲಿ ರಾಷ್ಟ್ರವಾದ ಜನರ ವಿರೋಧಿಯಾಗಿದೆ. ಅದು ಈ ನೆಲದ ಸಂಸ್ಕೃತಿಗೆ ಮಾರಕವಾಗಿದ್ದು, ಅದನ್ನು ಈ ನೆಲದಲ್ಲಿ ಅನುಷ್ಠಾನ ಮಾಡಲು ನಾವು ಎಂದಿಗೂ ಬಿಡುವುದಿಲ್ಲ ಎಂದರು.  

ಇತ್ತೀಚೆಗೆ ರಾಹುಲ್ ಗಾಂಧೀ ಅವರು ಕಾರ್ಮಿಕ, ಶ್ರಮಿಕ, ಬಡವರ ಬಗ್ಗೆ ಮಾತನಾಡಿದ್ದು, ಇದನ್ನು ಸಿಪಿಐ ಸ್ವಾಗತಿಸುತ್ತದೆ. ಕಾಂಗ್ರೆಸ್ ಪಾಠವನ್ನು ಕಲಿತಿದೆ. ಗಾಂಧಿ ಮತ್ತು ನೆಹರೂ ಅವರ ಕಲ್ಪನೆಯ ಸಮಾಜವಾದಿ ಪರಂಪರೆಯನ್ನು ಎಂದಿಗೂ ಬಿಡಬೇಡಿ ಕಿವಿಮಾತು ಹೇಳಿದರು.

ಈ ಕೆಂಪು ಬಾವುಟವನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ. ಆರೆಸ್ಸೆಸ್, ಬಿಜೆಪಿ ಗೂಂಡಾಗಳಿಗೆ, ಕಾರ್ಪೋರೇಟ್‍ಗಳಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಲು ನಾವು ಇಲ್ಲಿ ಸೇರಿದ್ದೇವೆ. ನಾವು ಕಮ್ಯೂನಿಷ್ಟರು, ಹೋರಾಟವೇ ನಮ್ಮ ಭಾಷೆ. ಜಿಂದಾಬಾದ್ ಎಂದು ಹೇಳುವ ಮೂಲಕ ಮತ್ತೆ ಹೋರಾಟ ಕಿಚ್ಚಿನೊಂದಿಗೆ ಕೆಂಬಾವುಟಕ್ಕೆ ನಮನ ಸಲ್ಲಿಸಿ, ಎತ್ತರಕ್ಕೆ ಹಾರಿಸುವೆವು. ನಾವು ನಿಮಗೆ ಎಂದಿಗೂ ತಲೆ ಬಾಗುವುದಿಲ್ಲ. ಪಕ್ಷ ಕಚೇರಿಗೆ ಬೆಂಕಿ ಹಾಕಿದರೆ, ನಾವು ಎಂದಿಗೂ ಓಡಿ ಹೋಗುವವರಲ್ಲ. ಹೆದರುವ ದಿನಗಳು ಕಳೆದೋಗಿದೆ. ನೀವು ಬೆಂಕಿ ಹಾಕಿ ಸುಟ್ಟರೂ, ನಾವು ಅದೇ ಬೂದಿಯಿಂದ ಎದ್ದು ಬರುತ್ತೇವೆ. ನಾವು ಕಮ್ಯನಿಷ್ಟರು ನಾವು ಹೋರಾಟ ಮಾಡಿ ಬಂದವರು ಎಂದು ಗುಡುಗಿದರು.

ಈ ದೇಶ, ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸಬೇಕಾದರೆ ಮತ್ತೆ ಜಾತ್ಯತೀತ, ಸಮಾಜವಾದಿ ಪಕ್ಷಗಳು ಒಂದಾಗಬೇಕಾಗಿದೆ ಎಂದ ಅವರು, ಇದು ಸಿಪಿಐ ಪಕ್ಷದ ಕಚೇರಿ ಮಾತ್ರವಲ್ಲ. ಇದು ಇಡೀ ದುಡಿಯುವ, ಶ್ರಮಿಕರ ಹಾಗೂ ಬಡವರ ಬದುಕು ಕಟ್ಟುವ ನೆಲೆ ಬೀಡು. ಧ್ವಂಸ ಮಾಡಿದ ಅದೇ ಸ್ಥಳದಲ್ಲೇ ಪಕ್ಷದ ಕಚೇರಿಯನ್ನು ಪುನರ್ ನಿರ್ಮಾಣ ಮಾಡಿದಾಗೆ ದೇಶವನ್ನು ಮತ್ತೆ ಕಟ್ಟುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಸರಕಾರದ ಅಡಿಪಾಯ ನಡುಗುತ್ತಿದ್ದು, ಕೆಲವೇ ದಿನಗಳಲ್ಲಿ ಪತನವಾಗಲಿದೆ. ಇದಕ್ಕೆ ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶದ ಮೂಲಕ ಜನರು ಉತ್ತರ ನೀಡಿದ್ದಾರೆ. ಮೋದಿ ಸರಕಾರ ಭ್ರಷ್ಟಾಚಾರ ಮುಕ್ತ ಸರಕಾರ ಎಂದು ಹೇಳುತ್ತಿದ್ದು, ಅದಕಿಂತ ದೊಡ್ಡ ಸುಳ್ಳು ಮತ್ತೊಂದಿಲ್ಲ. ಬಿಜೆಪಿ ಭ್ರಷ್ಟ ಪಕ್ಷ. ಕಾಂಗ್ರೆಸ್‍ನ ಬೋಪೋರ್ಸ್ ಹಗರಣದ ಸಾವಿರ ಪಟ್ಟು ಜಾಸ್ತಿ ರಫೇಲ್ ಹಗರಣದಲ್ಲಿ ಬಿಜೆಪಿ ಮಾಡಿದೆ. ದೇಶದ ಸಂಪತ್ತನ್ನು ಲೂಟಿ ಮಾಡಲು ಅಂಬಾನಿ, ಅದಾನಿಯಂತವರಿಗೆ ಅವಕಾಶ ಮಾಡಲಾಗಿದೆ. ಬಿಜೆಪಿಯ ಗ್ರಾಪಂ ಸದಸ್ಯನಿಂದ ಎಂಪಿಯವರೆಗೆ ಎಲ್ಲರೂ ಭ್ರಷ್ಟಾಚಾರಿಗಳು ಎಂದು ಆರೋಪಿಸಿದರು.

ಉತ್ತರ ಭಾರತದಲ್ಲಿ ಶ್ರೀರಾಮ, ದಕ್ಷಿಣದಲ್ಲಿ ಅಯ್ಯಪ್ಪ: 
ಶಬರೀಮಲೆ ಹೆಸರಿನಲ್ಲಿ ಕಮ್ಯೂನಿಷ್ಟರ ಮೇಲೆ ದಾಂಧಲೆ ಮಾಡಲು ನಿಮಗೆ ಅಯ್ಯಪ್ಪ ಸ್ವಾಮಿ ಹೇಳಿದ್ದಾರೆಯೇ? ಇದೆನಾ ನಿಮ್ಮ ಹಿಂದೂ ಧರ್ಮ?. ಎಂದು ಪ್ರಶ್ನಿಸಿದ ಅವರು, ಹಿಂದೂ ಧರ್ಮ ಎಲ್ಲಿಯೂ ಅನ್ಯಾಯ ಮಾಡಲು ಹೇಳುವುದಿಲ್ಲ. ನಿಮ್ಮದು ನಕಲಿ ಹಿಂದುತ್ವ ಎಂದ ಅವರು, ಉತ್ತರ ಭಾರತದಲ್ಲಿ ಶ್ರೀರಾಮ, ದಕ್ಷಿಣದಲ್ಲಿ ಅಯ್ಯಪ್ಪ ಸ್ವಾಮಿ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ದೇವರವನ್ನು ದೇವರಾಗಿ ಕಾಣಿ, ಅವರನ್ನು ಯಾವ ಪಕ್ಷಕ್ಕೆ ಸೀಮಿತ ಮಾಡಬೇಡಿ, ಅವರನ್ನು ಅವರಷ್ಟಕ್ಕೆ ಬಿಡಿ ಎಂದು ಹೇಳಿದರು.

ಗಾಂಧೀಜಿಯ ಕಲ್ಪನೆಯ ಹಿಂದೂ ಧರ್ಮ ನಮಗೆ ಬೇಕಾಗಿದ್ದು, ಗೋಡ್ಸೆಯ ಹಿಂದುತ್ವವಲ್ಲ. ಬಿಜೆಪಿಗರು ರಾಮಾಯಣವನ್ನು ಓದಲಿ, ಅದರಲ್ಲಿರುವ ನೈಜ ರಾಮನ ಬಗ್ಗೆ ತಿಳಿದುಕೊಳ್ಳಲಿ ಎಂದು ಹೇಳಿದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಕೋಮುವಾದಿ ಶಕ್ತಿಗಳು ಕೋಮು ಸಾಮರಸ್ಯಕ್ಕೆ ತೊಡಕು ಉಂಟು ಮಾಡುತ್ತಿದ್ದು, ಇವುಗಳನ್ನು ಕಿತ್ತೆಯಲು ಜಾತ್ಯತೀತ, ಎಡಪಕ್ಷಗಳು ಮತ್ತೆ ಒಂದಾಗಬೇಕು. ಸಿಪಿಐ ಪಕ್ಷದ ಕಚೇರಿಗೆ ಬೆಂಕಿ ಹಚ್ಚಿರುವುದನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ ಎಂದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎ.ಶಾಂತಾರಾಂ ಪೈ ಅವರ ಪುತ್ರ ಕಿಶೋರ್ ಎಸ್. ಪೈ, ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ, ಡಾ. ಸಿದ್ದನಗೌಡ ಪಾಟೀಲ, ಪಿ.ವಿ.ಲೋಕೇಶ್, ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಎಐಟಿಯುಸಿ ರಾಜ್ಯ ಅಧ್ಯಕ್ಷ ಅನಂತ ಸುಬ್ಬರಾವ್, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಅಧ್ಯಕ್ಷೆ ಜ್ಯೋತಿ ಎ., ಪಕ್ಷ, ವಿವಿಧ ಸಂಘಟನೆಗಳ ಮುಖಂಡರಾ ಎಸ್.ಕೆ. ರಾಮಚಂದ್ರ, ಜನಾರ್ದನ್, ಪ್ರಸನ್ನ ಕುಮಾರ್, ಶಿವಣ್ಣ, ಸಂತೋಷ್, ಕೆ.ವಿ.ಭಟ್, ಜ್ಯೋತಿ, ಪ್ರಭಾಕರ್ ರಾವ್, ರಮೇಶ್ ನಾಯ್ಕ್, ಜಾಫರ್ ಶರೀಫ್ ಉಪಸ್ಥಿತರಿದ್ದರು.

ಸಿಪಿಐ ತಾಲೂಕು ಕಾರ್ಯದರ್ಶಿ ಬಿ.ಶೇಖರ್ ಸ್ವಾಗತಿಸಿ, ಜಿಲ್ಲಾ ಜೊತೆ ಕಾರ್ಯದರ್ಶಿ ಸೀತರಾಮ ಬೇರಿಂಜ ವಂದಿಸಿ, ಸದಸ್ಯ ಸುರೇಶ್ ನಿರೂಪಿಸಿದರು.

ಘಟನೆಗೆ ಸಂಬಂಧಿಸಿ ಪೊಲೀಸರು ಇದುವೆರಗೂ ಆರೋಪಿಗಳನ್ನು ಬಂಧಿಸಿಲ್ಲ. ಇದರಲ್ಲಿ ಪೊಲೀಸರ ಅಸಹಾಯಕತೆ ಎದ್ದು ಕಾಣುತ್ತಿದೆ. ಧರ್ಮ, ಧರ್ಮದೊಳಗೆ ವಿಷಬೀಜವನ್ನು ಬಿತ್ತುತ್ತಿರುವ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪೊಲೀಸರ ರಕ್ಷಣೆಯಲ್ಲಿ ತಿರುಗುವಂತಾಗಿದೆ. ಕೋಮುವಾದ ಎಂಬ ಸಾಂಕ್ರಾಮಿಕ ರೋಗವನ್ನು ನಾವೆಲ್ಲರೂ ಸೇರಿ ನಿರ್ಮೂಲನೆ ಮಾಡಬೇಕಾಗಿದೆ ಮತ್ತು ಇದಕ್ಕಾಗಿ ಶ್ರಮಿಸುವವರಿಗೆ ರಕ್ಷಣೆಯೂ ನಮ್ಮ ಜವಾಬ್ದಾರಿಯಾಗಲಿ.
-ಡಾ. ಸಿದ್ಧನಗೌಡ ಪಾಟೀಲ, ಸಿಪಿಐ ರಾಷ್ಟ್ರೀಯ ಮಂಡಲಿಯ ಮಾಜಿ ಸದಸ್ಯ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News