×
Ad

ವಾಣಿಜ್ಯ ಸಂಕೀರ್ಣದಲ್ಲಿ ಕುದುರೆ ರೇಸ್ ಗೇಮ್: ಸದಸ್ಯನ ಪ್ರಶ್ನೆಗೆ ಪೊಲೀಸರ ಮೊರೆ ಹೋಗಲು ಸೂಚಿಸಿದ ಮೇಯರ್

Update: 2019-01-30 19:15 IST

ಮಂಗಳೂರು, ಜ.30: ಕಾವೂರು ಪ್ರದೇಶದ ವಾಣಿಜ್ಯ ಸಂಕೀರ್ಣವೊಂದರಲ್ಲಿ ಕುದುರೆ ರೇಸ್ ಗೇಮ್ ನಡೆಯುತ್ತಿದೆ ಎಂಬುದಾಗಿ ಸದಸ್ಯರೊಬ್ಬರ ಆರೋಪಕ್ಕೆ ಮೇಯರ್‌ರವರು ಪೊಲೀಸ್ ಮೊರೆ ಹೋಗಲು ಸೂಚಿಸಿದ ಪ್ರಸಂಗ ಇಂದು ನಡೆದ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಮೇಯರ್ ಭಾಸ್ಕರ್ ಕೆ. ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ರಾಜೇಶ್‌ರವರು ಮಾತನಾಡಿ, ಕಾವೂರು ಪ್ರದೇಶದಲ್ಲಿ ಮೂರು ವರ್ಷಗಳ ಹಿಂದೆ ವಾಣಿಜ್ಯ ಸಂಕೀಣವೊಂದರಲ್ಲಿ ಸ್ಕಿಲ್ ಗೇಮ್ ಆರಂಭವಾಗಿತ್ತು. ಬಳಿಕ ಅಲ್ಲಿ ಇಸ್ಪೀಟ್ ಆಟ ನಡೆಯುತ್ತಿದ್ದು, ಇದೀಗ ಸ್ಕ್ರೀನ್‌ನಲ್ಲಿ ಕುದುರೆ ರೇಸ್ ಗೇಮ್ ಆರಂಭವಾಗಿದೆ. ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದರು.

ಉತ್ತರದಿಂದ ಸಮಾಧಾನಗೊಳ್ಳದ ರಾಜೇಶ್, ವಾಣಿಜ್ಯ ಕಟ್ಟಡಗಳಿಗೆ ಉದ್ದಿಮೆ ಪರವಾನಿಗೆ ನೀಡುವುದು ಮಹಾನಗರ ಪಾಲಿಕೆಯಿಂದ. ಈ ರೀತಿಯ ಅಕ್ರಮಗಳು ನಡೆಯುವಾಗ ನಮಗೆ ಅದಕ್ಕೆ ಬೀಗ ಹಾಕಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಈ ಸಂದರ್ಭ ಸದಸ್ಯ ಅಶೋಕ್ ಡಿ.ಕೆ. ಮಾತನಾಡಿ, ಈ ಹಿಂದೆ ಸ್ಕಿಲ್‌ಗೇಮ್ ನಡೆಸುವ ಕಟ್ಟಡಗಳಿಗೆ ಬೀಗ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆಯುಕ್ತರು ಹಾಗೂ ಮೇಯರ್ ಕೋರ್ಟ್‌ಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದಾಗ ಅದನ್ನು ಪುನರುಚ್ಚರಿಸುವ ಸರದಿ ಮೇಯರ್‌ರದ್ದಾಗಿತ್ತು. 

2 ದಿನದೊಳಗೆ ನೀರು ಪೂರೈಕೆ ಸರಿಪಡಿಸದಿದ್ದರೆ ಧರಣಿ
ತನ್ನ ವಾರ್ಡ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಟ್ಯಾಂಕರ್ ಮೂಲಕ ನೀರು ಪೂರೈಕೆಯೂ ಕೆಲವು ಪ್ರದೇಶಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಮೇಯರ್ ಕವಿತಾ ಸನಿಲ್ ಸಭೆಯಲ್ಲಿ ಸಮಸ್ಯೆಯನ್ನು ಪ್ರಸ್ತಾಪಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿ ಮಾಜಿ ಮೇಯರ್ ತಿಳಿಸಿರುವ ಸಮಸ್ಯೆಗೆ ಸಂಬಂಧಿಸಿ ಸಂಬಂಧಪಟ್ಟವರನ್ನು ಕಳುಹಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ. ಪೈಪ್‌ಲೈನ್ ಒಡೆದು ಹೋದ ಸಂದರ್ಭದಲ್ಲಿ ಅಡಚಣೆಯಾಗುತ್ತದೆ. ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉತ್ತರಿಸಿದರು. ಜನರಿಗೆ ನೀರಿಲ್ಲದೆ ಸಮಸ್ಯೆಯಾಗುತ್ತಿದೆ. ಹಾಗಾಗಿ ಸಮಸ್ಯೆಯನ್ನು ಶೀಘ್ರ ಎರಡು ದಿನಗಳೊಳಗೆ ಪರಿಹರಿಸಬೇಕು. ಇಲ್ಲವಾದಲ್ಲಿ ತಾನು ಧರಣಿ ಕೂರುವುದಾಗಿ ಕವಿತಾ ಸನಿಲ್ ನುಡಿದರು.

ಈ ಸಂದರ್ಭ ಸದಸ್ಯರಾದ ಪೂರ್ಣಿಮಾ, ತಿಲಕ್‌ಚಂದ್ರ ಅವರು ಕೂಡಾ 24*7 ನೀರು ಕೊಡುತ್ತಿರುವುದಾಗಿ ಮುಖ್ಯ ಸಚೇತಕರು ಹಿಂದಿನ ಸಭೆಯಲ್ಲಿ ತಿಳಿಸಿದ್ದಾರಾದರೂ, ಆಡಳಿತ ಪಕ್ಷದ ಸದಸ್ಯರಿಂದಲೇ ನೀರಿನ ಸಮಸ್ಯೆಗಳು ವ್ಯಕ್ತವಾಗುತ್ತಿವೆ. ನಮ್ಮ ವಾರ್ಡ್‌ಗಳಲ್ಲಿಯೂ ನೀರಿನ ಸಮಸ್ಯೆ ಇದೆ ಎಂದು ಹೇಳಿದರು.

ಬಜಾಲ್- ಫೈಜಲ್ ನಗರಕ್ಕೆ ಬಸ್ಸಿನ ವ್ಯವಸ್ಥೆಗೆ ಒತ್ತಾಯ
ಸದಸ್ಯ ಅಬ್ದುಲ್ ರವೂಫ್‌ರವರು ಮಾತನಾಡಿ, ಬಜಾಲ್- ಫೈಝಲ್‌ನಗರಕ್ಕೆ ಬಸ್ಸಿನ ಪ್ರಸ್ತಾಪವನ್ನು ಕಳೆದ ಹಲವು ವರ್ಷಗಳಿಂದ ಮಾಡುತ್ತಿದ್ದರೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬಸ್ಸು ಮಾಲಕರ ಲಾಬಿಯಿಂದ ಅಲ್ಲಿಗೆ ನರ್ಮ್‌ನಿಂದಲೂ ಬಸ್ಸು ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೇಯರ್ ಪ್ರತಿಕ್ರಿಯಿಸಿ, ಆ ವಿಷಯ ಈ ಇಲ್ಲಿ ಚರ್ಚೆಗೆ ಅಪ್ರಸ್ತುತ ಎಂದರು. ಇದರಿಂದ ಬೇಸರಗೊಂಡ ಅಬ್ದುಲ್ ರವೂಫ್, ನಮ್ಮ ಕ್ಷೇತ್ರದ ಸಮಸ್ಯೆಯನ್ನು ತಿಳಿಸಲು ಇರುವ ವೇದಿಕೆ ಈ ಸಭೆ. ಇಲ್ಲಿ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದು, ಸಮಸ್ಯೆಗೆ ಪರಿಹಾರ ಒದಗಿಸಬೇಕು. ಅದು ಬಿಟ್ಟು ಚರ್ಚೆ ಮಾಡುವುದು ಬೇಡ ಎಂದರೆ ನಾವು ಎಲ್ಲಿ ಮಾತನಾಡುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಸದಸ್ಯ ವಿಜಯ ಕುಮಾರ್ ಮಾತನಾಡಿ, ಸ್ಥಳೀಯ ಶಾಸಕರ ಪ್ರಯತ್ನದ ಮೇರೆಗೆ ಇಂದು ಈ ಪ್ರದೇಶದಲ್ಲಿ ನರ್ಮ್‌ನಡಿ ಪ್ರಾಯೋಗಿಕವಾಗಿ ಬಸ್ ಸಂಚಾರ ನಡೆಸಲಾಗಿದೆ ಎಂದರು. ಈ ಬಗ್ಗೆ ಕೆಲ ನಿಮಿಷ ಚರ್ಚೆ ನಡೆದು ಜಿಲ್ಲಾಧಿಕಾರಿ ಮೂಲಕ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಮೇಯರ್ ತಿಳಿಸಿದರು.

ಉಪ ಮೇಯರ್ ಮುಹಮ್ಮದ್ ಕೆ., ಸ್ಥಾಯಿಸಮಿತಿ ಅಧ್ಯಕ್ಷರಾದ ಪ್ರವೀಣ್ ಚಂದ್ರ ಆಳ್ವ, ರಾಧಾಕೃಷ್ಣ, ಲತಾ ಸಾಲ್ಯಾನ್, ನವೀನ್ ಡಿಸೋಜಾ, ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News