×
Ad

ಪ್ರತಿಯೊಬ್ಬ ಭಾರತೀಯನಲ್ಲೂ ಒಬ್ಬ ಗಾಂಧಿ ಜೀವಂತವಾಗಿರಬೇಕು: ಎಂ.ಜಿ. ಹೆಗಡೆ

Update: 2019-01-30 19:33 IST

ಮಂಗಳೂರು,ಜ.30: ಗಾಂಧೀಜಿ ಚಿಂತನೆಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬ ಭಾರತೀಯನಲ್ಲೂ ಗಾಂಧೀಜಿ ಜೀವಂತವಾಗಿರಬೇಕು ಎಂದು ಸಾಮಾಜಿಕ ಮುಂದಾಳು ಎಂ.ಜಿ ಹೆಗಡೆ ಹೇಳಿದರು. 

ಅವರು ಗಾಂಧಿ ಹುತಾತ್ಮ ದಿನದ ಅಂಗವಾಗಿ ಟೀಮ್ ಇಂಡಿಯಾ ಮಂಗಳೂರು ಘಟಕ ಆಯೋಜಿಸಿದ್ದ ನೂರಾರು ಗಾಂಧಿಯರ ನಡಿಗೆ ಸೌಹಾರ್ದದ ಕಡೆಗೆ ಎಂಬ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿ ಸಮಾಜವನ್ನು ಧರ್ಮದ ಹಾಗೂ ಜಾತಿಯ ಹೆಸರಿನಲ್ಲಿ ವಿಭಜಿಸುವ ಮೂಲಕ ಒಂದು ದೇಶವನ್ನು ಕಟ್ಟಲು ಸಾಧ್ಯವಿಲ್ಲ. ಎಲ್ಲರನ್ನೂ ಸೇರಿಸಿ ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದತೆಯಿಂದ ಮಾತ್ರ ಈ ದೇಶವನ್ನು ಬಲಿಷ್ಠ ಭಾರತವನ್ನಾಗಿ ರೂಪುಗೊಳಿಸಲು ಸಾಧ್ಯ ಎಂದು  ಹೇಳಿದರು. 

ಒಂದು ಧರ್ಮದವನಾಗಿದ್ದು ಇನ್ನೊಂದು ಧರ್ಮದ ವ್ಯಕ್ತಿಯನ್ನು ಗೌರವಿಸುವುದು ರಾಷ್ಟ್ರಪ್ರೇಮ. ಹಿಂಸೆಯನ್ನು ಪ್ರತಿಪಾದಿಸುವವರು ಗಾಂಧಿಯನ್ನು ದ್ವೇಷಿಸುತ್ತಾರೆ. ಅಹಿಂಸೆಯನ್ನು ಪ್ರತಿಪಾದಿಸುವವರು ಗಾಂಧಿಯನ್ನು ಪ್ರೀತಿಸುತ್ತಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ದೇಶದಲ್ಲಿ ಗಾಂಧಿ ಹತ್ಯೆಯನ್ನು ನಡೆಸಿದವರು ವ್ಯವಸ್ಥಿತವಾಗಿ ತಮ್ಮ ಚಿಂತನೆಯನ್ನು ಹರಡುತ್ತಿದ್ದು, ಇದರ ವಿರುದ್ಧ ದೇಶದ ಜನತೆಯನ್ನು ಜಾಗೃತಗೊಳಿಸುವ ಜವಾಬ್ದಾರಿಯನ್ನು ಟೀಮ್ ಇಂಡಿಯಾ ಕೈಗೊಂಡಿದೆ ಎಂದರು. ಇಂದು ವ್ಯಕ್ತಿ ಕೇಂದ್ರಿತ ಸಂಘಟನೆ ಕಟ್ಟಿಕೊಂಡು ಅದನ್ನೇ ದೇಶಪ್ರೇಮ ಎಂದು ಬಿಂಬಿಸುವ ನಡೆ ದೇಶಕ್ಕೆ ಮಾರಕವಾಗಿದ್ದು, ದೇಶ ಎಂದರೆ ಒಂದು ವ್ಯಕ್ತಿಯಲ್ಲ, ಒಂದು ದೇಶದಲ್ಲಿರುವ ಜನ ಸಮೂಹವನ್ನು ಒಟ್ಟಾಗಿ ಕೊಂಡೊಯ್ಯುವುದೇ ನೈಜ ದೇಶಪ್ರೇಮದ ಕೆಲಸ ಎಂದವರು ಹೇಳಿದರು. 

ಮಹಾತ್ಮ ಗಾಂಧಿ ಹುತಾತ್ಮ ದಿನದ ಅಂಗವಾಗಿ ಇಂದು ನೂರಾರು ಗಾಂಧಿಯರ ನಡಿಗೆ, ಸೌಹಾರ್ದತೆ ಕಡೆಗೆ ಕಾರ್ಯಕ್ರಮವು ಇಂದು ನಗರದ ಗಾಂಧಿ ಪ್ರತಿಮೆಗೆ ಬಳಿಯಿಂದ ಪ್ರತಿಮೆಗೆ ಹೂ ಹಾರ ಹಾಕುವ ಮೂಲಕ ಚಾಲನೆಗೊಂಡು ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯಿತು. ವೇದಿಕೆಯಲ್ಲಿ ಡಿಎಸ್ಎಸ್ ದಲಿತ ಸಂಘಟನೆಯ ಹಿರಿಯ ಮುಂದಾಳು ಎಂ ದೇವದಾಸ್, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಇಂಟಕ್ ಕಾರ್ಮಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ, ಮಹಿಳಾ ಮುಖಂಡರಾದ ಜಯಂತಿ ಬಿ ಶೆಟ್ಟಿ, ಹಿರಿಯ ಸಾಮಾಜಿಕ ಮುಂದಾಳು ಯಶವಂತ ಮರೋಳಿ, ವಾಸುದೇವ ಉಚ್ಚಿಲ, ಯೋಗೀಶ್ ಜಪ್ಪಿನಮೊಗರು, ಕೃಷ್ಣಾ ಚಿತ್ರಾಪುರ, ಅಬುಬಕ್ಕರ್ ಬಾವಾ, ದಿನೇಶ್ ಕುಂಪಲ ,ಡಿವೈಎಫ್ಐ ಜಿಲ್ಲಾದ್ಯಕ್ಷ ಬಿಕೆ ಇಮ್ತಿಯಾಜ್ ಉಪಸ್ಥಿತರಿದ್ದರು.

ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರು ಮನೋಜ್ ವಾಮಂಜೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News