×
Ad

ರಾಜ-ಗುರು ಪರಂಪರೆ ಜೊತೆಯಾಗಿ ಬೆಳೆದಿವೆ: ಯದುವೀರ ಒಡೆಯರ್

Update: 2019-01-30 20:35 IST

ಉಡುಪಿ, ಜ.30: ದೇಶದಲ್ಲಿ ರಾಜಪರಂಪರೆ ಮತ್ತು ಗುರು ಪರಂಪರೆ ಜೊತೆಜೊತೆಯಾಗಿ ಬೆಳೆದಿವೆ. ಮೈಸೂರು ಅರಮನೆಗೂ, ಅಷ್ಟಮಠಕ್ಕೂ ಶತಮಾನಗಳ ನಂಟಿದೆ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.

ಮುಂದಿನ ಅದಮಾರು ಪರ್ಯಾಯದ ಪೂರ್ವಭಾವಿ ಸಿದ್ಧತೆಗಳಲ್ಲಿ ಎರಡನೇದಾದ ಅಕ್ಕಿ ಮುಹೂರ್ತದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಪೇಜಾವರ ಹಿರಿಯಶ್ರೀಗಳ ಮೊದಲ ಪರ್ಯಾಯ ಸಂದರ್ಭದಲ್ಲಿ 1955 ರಲ್ಲಿ ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಉಡುಪಿಗೆ ಆಗಮಿಸಿ, ಅದಮಾರು ಗೆಸ್ಟ್‌ಹೌಸ್‌ಗೆ ಶಿಲಾನ್ಯಾಸ ನೆರವೇರಿಸಿದ್ದರು. ಪೇಜಾವರ ಶ್ರೀಗಳ 5ನೇ ಪರ್ಯಾಯ ಕಾಲದಲ್ಲಿ ಅದಮಾರು ಮಠದ ನವೀಕರಣಗೊಂಡ ಗೆಸ್ಟ್‌ಹೌಸ್‌ನ ಉದ್ಘಾಟನೆ ಮಾಡುವ ಅವಕಾಶ ನನಗೆ ಲಭಿಸಿತ್ತು ಎಂದರು.

ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ಅದಮಾರು ಮಠದ ಪರ್ಯಾಯ ವಿಶೇಷವಾಗಿದೆ. ಇಲ್ಲಿ ಈಶಪ್ರಿಯರೂ ಇದ್ದಾರೆ. ವಿಶ್ವಪ್ರಿಯರೂ ಇದ್ದಾರೆ. ಪಟ್ಟದ ದೇವರು ಕಾಳಿಯಮರ್ಧನ ಕೃಷ್ಣ ಮತ್ತು ಕೃಷ್ಣ ಮಠದ ಬಾಲಕೃಷ್ಣ ರೂಪಗಳು ದೇಶಕ್ಕೆ ಜ್ಞಾನದ ಬೆಳಕನ್ನು ನೀಡಲಿ ಎಂದರು.

ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ಲಿಖಿತ ಸಂವಿಧಾನ, ನಿಯಮಗಳಿಲ್ಲದಿದ್ದರೂ 8 ಶತಮಾನದಿಂದ ಆಚಾರ್ಯ ಮಧ್ವರ ಹಾಗೂ ವಾದಿರಾಜ ಸ್ವಾಮಿಗಳ ಸಂಕಲ್ಪವನ್ನು ಅಷ್ಟಮಠಗಳ ಯತಿಗಳು ನಿರಂತರವಾಗಿ ಪಾಲಿಸುತ್ತಿರುುದು ಸೋಜಿಗದ ಸಂಗತಿ ಎಂದರು.

ಅದಮಾರು ಮಠದ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಮುಂದಿನ 2 ವರ್ಷ ಕೃಷ್ಣ ಮಠದಲ್ಲಿ ಅನ್ನಪ್ರಸಾದಕ್ಕೆ 16 ದೇಸಿಯ ತಳಿಯ ಸಾವಯವ ರೀತಿಯಲ್ಲಿ ಬೆಳೆದ ಅಕ್ಕಿಯನ್ನು ಬಳಸಲಾಗುವುದು. ಈ ಅಕ್ಕಿಯನ್ನು ರೈತರಿಂದ ನೇರವಾಗಿ ಖರೀದಿಸಲಾಗುತ್ತದೆ. ಇದರಿಂದ ಮಧ್ಯವರ್ತಿಗಳಿಲ್ಲದೇ ರೈತರಿಗೆ ಲಾಭವಾಗಲಿದೆ ಎಂದರು.

ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠದ ಶ್ರೀ ವಿಶ್ವವಲ್ಲ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News