ಜೀವಭಾವ ಸಂವೇದನೆಗಳನ್ನು ನಿರೂಪಿಸುವುದು ಕಾಲದ ತುರ್ತು: ನಾದ ಮಣಿನಾಲ್ಕೂರು
ಉಡುಪಿ, ಜ.30: ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಗಾಂಧಿ ಸ್ಮೃತಿ ಪ್ರಯುಕ್ತ ನಾದ ಮಣಿನಾಲ್ಕೂರು ಅವರಿಂದ ಕತ್ತಲೆ ಹಾಡು ವಿಶಿಷ್ಠ ಗಾಯನ ಕಾರ್ಯಕ್ರಮವನ್ನು ಬುಧವಾರ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಆಯೋಜಿಸ ಲಾಗಿತ್ತು.
ಕಲಾವಿದ ನಾದ ಮಣಿನಾಲ್ಕೂರು ಮಾತನಾಡಿ, ಕಳೆದ ವರ್ಷ ಜು.25ರಿಂದ ಮಡಿಕೇರಿಯಿಂದ ಆರಂಭಗೊಂಡ ಕರ್ನಾಟಕ ಯಾತ್ರೆಯು ಈಗಾಗಲೇ 25 ಜಿಲ್ಲೆಗಳಲ್ಲಿ ಸುತ್ತಿ ಇದೀಗ 26ನೆ ಜಿಲ್ಲೆಯಾಗಿರುವ ಉಡುಪಿಗೆ ಆಗಮಿಸಿದೆ. ಇನ್ನು ನಾಲ್ಕು ಜಿಲ್ಲೆಗಳು ಬಾಕಿ ಇವೆ. ಪ್ರತಿ ಜಿಲ್ಲೆಯಲ್ಲಿ ಆರು ಏಳು ದಿನಗಳ ಕಾಲ ಇದ್ದು, ಹಳ್ಳಿ, ಶಿಕ್ಷಣ ಸಂಸ್ಥೆ, ಸಂಘಟನೆಗಳ ಜೊತೆ ಸಂವಾದ ನಡೆಸಿ ಮಾತಿನ ಮೂಲಕ ಜೀವ ಭಾವ ಸಂವೇದನೆಗಳನ್ನು ನಿರೂಪಿಸಲಾಗುತ್ತಿದೆ. ಅದು ಈ ಕಾಲದ ತುರ್ತು ಕೂಡ ಆಗಿದೆ ಎಂದರು.
ತೆಂಕುತಿಟ್ಟು ಯಕ್ಷಗಾನ ಭಾಗವತನಾಗಿದ್ದ ನಾನು ಅಲ್ಲಿನ ಜಾತಿ, ಕೋಮು, ಲಿಂಗ ತಾರತಮ್ಯದಿಂದ ವಿಚಲಿತಗೊಂಡು ಅದರಿಂದ ಹೊರಗೆ ಬಂದು ಜನ ರೊಂದಿಗೆ ಮುಕ್ತವಾಗಿ ಮಾತನಾಡುವ ನಿಟ್ಟಿನಲ್ಲಿ ಕಳೆದ ಏಳು ವರ್ಷಗಳಿಂದ ಅರಿವು ಎಂಬ ಸಂಘಟನೆಯನ್ನು ಕಟ್ಟಿ ಯುವಜನತೆಯನ್ನು ಸೌಹಾರ್ದ ಪರಂಪರೆಗೆ, ಒಳಗೊಳ್ಳುವಿಕೆ ಹಾಗೂ ಮನುಷ್ಯತ್ವದೆಡೆಗೆ ಕೊಂಡೊಯ್ಯುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್, ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಜಿ.ವಿಜಯ, ದಲಿತ ಮುಖಂಡ ಶ್ಯಾಮ್‌ರಾಜ್ ಬಿರ್ತಿ, ಹಿರಿಯ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ, ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್, ವೇದಿಕೆ ಕಾರ್ಯದಶಿ ದಿನಕರ ಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.
ಹಿರಿಯ ಚಿಂತಕ ಪ್ರೊ.ಫಣಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನೀತ್ ರಾವ್ ಕಾರ್ಯಕ್ರಮ ನಿರೂಪಿಸಿದರು.