ಫೆ.3ರಂದು ಉಡುಪಿ ಜಿಲ್ಲಾ ರೈತ ಸಮಾವೇಶ
ಉಡುಪಿ, ಜ.30: ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಕೃಷಿ ಮಾಹಿತಿ ಶಿಬಿರ ಮತ್ತು ವಸ್ತು ಪ್ರದರ್ಶನ ‘ಜಿಲ್ಲಾ ರೈತ ಸಮಾವೇಶ’ವನ್ನು ಫೆ.3 ರಂದು ಬೆಳಗ್ಗೆ 9:30ರಿಂದ ಸಂಜೆ 4ಗಂಟೆಯವರೆಗೆ ಉಡುಪಿ ಕುಂಜಿಬೆಟ್ಟು ಶ್ರೀಶಾರದಾ ಮಂಟಪದ ಆವರಣದಲ್ಲಿ ಆಯೋಜಿಸಲಾಗಿದೆ.
ಸಮಾವೇಶವನ್ನು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಮಂಜುನಾಥ ಕೆ.ನಾಯ್ಕಾ ಉದ್ಘಾಟಿಸಲಿರುವರು. ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ದಿಕ್ಸೂಚಿ ಭಾಷಣ ಮಾಡಲಿರುವರು ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ ಸುದ್ದಿಗೋಷ್ಠಿಯಲ್ಲಿ ಇಂದು ತಿಳಿಸಿದ್ದಾರೆ.
ಮಧ್ಯಾಹ್ನ 12ಗಂಟೆಯಿಂದ ಕೃಷಿ ವಿಚಾರಗೋಷ್ಟಿಗಳು ನಡೆಯಲಿದ್ದು, ಮೊದಲ ಗೋಷ್ಠಿಯಲ್ಲಿ ತೋಟಗಾರಿಕಾ ಬೆಳೆಗಳಲ್ಲಿ ಪೋಷಕಾಂಶಗಳ ನಿರ್ವಹಣೆ, ಕೃಷಿಗೆ ಪೂರಕವಾದ ವಿದ್ಯಾಭ್ಯಾಸ, ಅಡಿಕೆ ಕೊಳೆರೋಗದ ನಿರ್ವಹಣೆ, ಸ್ವಾವಲಂಬಿ ಜೀವನಕ್ಕೆ ಸಮಗ್ರ ಕೃಷಿ ಕುರಿತು ಮತ್ತು ಎರಡನೆ ಗೋಷ್ಠಿಯಲ್ಲಿ ನಿರಂತರ ಆದಾಯಕ್ಕಾಗಿ ಮಲ್ಲಿಗೆ ಕೃಷಿ, ತೋಟಗಾರಿಕಾ ಬೆಳೆಗಳಲ್ಲಿ ಪೋಷಕಾಂಶಗಳ ಮಹತ್ವ, ಜಲ ಮರುಪೂರಣದ ಅವಶ್ಯಕತೆ, ಕರಾವಳಿಯಲ್ಲಿ ಹೊಸ ಹಣ್ಣಿನ ಬೆಳೆಗಳ ಸಾಧ್ಯತೆಗಳ ಕುರಿತು ಹಾಗೂ ಮೂರನೆ ಗೋಷ್ಠಿಯಲ್ಲಿ ಹೈನುಗಾರಿಕೆಯಲ್ಲಿ ಪ್ರಥಮ ಚಿಕಿತ್ಸೆ, ಬಂಜೆತನ ನಿರ್ವಹಣಾ ಕ್ರಮಗಳು, ಲಾಭ ದಾಯಕ ಆಡು ಸಾಕಾಣೆ, ಬಣ್ಣದ ಮೊಟ್ಟೆ ಕೋಳಿ ಸಾಕಾಣೆ, ರೈತರ ಆದಾಯ ಭದ್ರತೆಯ ಕ್ರಮಗಳ ಕುರಿತು ನಡೆಯಲಿವೆ.
ಕೃಷಿ, ತೋಟಗಾರಿಕೆ, ವಿದ್ಯುತ್, ಸಹಕಾರಿ, ಕಂದಾಯ ಇಲಾಖೆಗಳ ಅಧಿಕಾರಿಗಳಿಂದ ರೈತಪರ ಯೋಜನೆಗಳು ಮತ್ತು ಕೃಷಿಕರ ವಿವಿಧ ಸಮಸ್ಯೆಗಳ ಪರಿ ಹಾರ- ಮಾರ್ಗೋಪಾಯ ಕುರಿತು ಮಾಹಿತಿ- ಪ್ರಶ್ನೋತ್ತರಗಳು ಮಧ್ಯಾಹ್ನ 3 ಗಂಟೆಯಿಂದ 4 ಗಂಟೆಯವರೆಗೆ ನಡೆಯಲಿದೆ. ಆಧುನಿಕ ಕೃಷಿ ಪರಿಕರಗಳು, ಹೊಸ ಆವಿಷ್ಕೃತ ಯಂತ್ರೋಪಕರಣಗಳ ಪ್ರದರ್ಶನ, ಮಾರಾಟ ಮಳಿಗೆ, ಬೆಳೆಗಳ ಸುಧಾರಿತ ತಂತ್ರಜ್ಞಾನದಿಂದ ಬೆಳೆಸಿದ ಗಿಡಗಳು, ಬೀಜ, ಕೃಷಿ ಸಂಬಂಧಿ ಪುಸ್ತಕ ಮಳಿಗೆಗಳು ಇರುತ್ತವೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ, ಉಪಾಧ್ಯಕ್ಷರಾದ ದಿನೇಶ್ ಶೆಟ್ಟಿ ಹೆರ್ಗ, ಶ್ರೀನಿವಾಸ್ ಬಲ್ಲಾಳ್, ಕಾರ್ಯ ದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು ಉಪಸ್ಥಿತರಿದ್ದರು.