ಹಣ ಎಗರಿಸಿದ ಪ್ರಕರಣ: ಆರೋಪಿ ಬಂಧನ
ಪುತ್ತೂರು,ಜ.30: ಅಂಗಡಿಯೊಂದಕ್ಕೆ ನುಗ್ಗಿ ಹಣ ಎಗರಿಸಿ ಪರಾರಿಯಾದ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ನೇಜಿಕಾರು ನಿವಾಸಿ ಮಹಮ್ಮದ್ ಶಾಫಿ(27) ಬಂಧಿತ ಆರೋಪಿ. ಈತ ಜ.29ರಂದು ಪುತ್ತೂರು ನಗರದ ಹೊರವಲಯದ ಕಬಕ ಎಂಬಲ್ಲಿರುವ ಗೋಪಾಲಕೃಷ್ಣ ರೈ ಎಂಬವರ ಅಂಗಡಿಗೆ ನುಗ್ಗಿ ಕ್ಯಾಶ್ ಕೌಂಟರ್ ನ ಡ್ರಾಯರ್‍ನಲ್ಲಿ ಇರಿಸಲಾಗಿದ್ದ 23,000 ರೂ. ನಗದು ಹಣ ದೋಚಿಕೊಂಡು ಪರಾರಿಯಾಗಿದ್ದ. ದರೋಡೆ ಪ್ರಕರಣವೊಂದರಲ್ಲಿ ಬಂಧನಕ್ಕೆ ಸಿಲುಕಿ ಮಂಗಳೂರಿನ ಉರ್ವ ಠಾಣೆಯಲ್ಲಿ ಕೇಸು ಎದುರಿಸುತ್ತಿದ್ದ ಈತ ಕೆಲವು ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎನ್ನಲಾಗಿದೆ.
ಸಾರ್ವಜನಿಕರು ನೀಡಿದ ಮಾಹಿತಿಯಂತೆ ಪುತ್ತೂರು ನಗರ ಠಾಣೆಯ ಪೊಲೀಸರು ಇನ್‍ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ನೇತೃತ್ವದಲ್ಲಿ ತನಿಖೆ ನಡೆಸಿದ್ದು, ಸಿ.ಸಿ. ಕ್ಯಾಮರಾ ದೃಶ್ಯವನ್ನು ಗಮನಿಸಿ ಅದರ ಆಧಾರದಲ್ಲಿ ಆರೋಪಿಯ ಗುರುತು ಪತ್ತೆ ಹಚ್ಚಿದ್ದರು. ಬಳಿಕ ಕಾರ್ಯಾಚರಣೆ ನಡೆಸಿ ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿ ಆರೋಪಿ ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಆತನನ್ನು ಬಂಧಿಸಿದ್ದರು.
ಬುಧವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ 13 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.