ಅಕ್ರಮವಾಗಿ ಸಂಗ್ರಹಿಸಿದ್ದ 15 ಟಿಪ್ಪರ್ ಲಾರಿ ಮರಳು ವಶ
ಮಂಗಳೂರು, ಜ.30: ತಾಲೂಕಿನ ಅಡ್ಯಾರು ಕೆಮ್ಮಂಜೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ 15 ಟಿಪ್ಪರ್ ಲಾರಿಯಷ್ಟು ಮರಳನ್ನು ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಲೂಕು ಅಡ್ಯಾರು ಗ್ರಾಮದ ಕೆಮ್ಮಂಜೂರು ಎಂಬಲ್ಲಿ ಅಡ್ಯಾರು ಕಟ್ಟೆಯಿಂದ ಅಡ್ಯಾರು ಪದವಿಗೆ ಹೋಗುವ ರಸ್ತೆಯಲ್ಲಿ ಬಿಗ್ ಗ್ಯಾರೇಜ್ ಬಳಿ ಉದಯ ಎಂಬವರ ಖಾಲಿ ಜಾಗದಲ್ಲಿ ಜಯಶೀಲ ಅಡ್ಯಂತಾಯ ಎಂಬವರು ಮರಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು. ಈ ಬಗ್ಗೆ ಪೊಲೀಸರಿಗೆ ಬಂದ ಖಚಿತ ಮಾಹಿತಿಯಂತೆ ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಸ್ಥಳ ಪರಿಶೀಲಿಸಿದಾಗ ಸುಮಾರು 15 ಟಿಪ್ಪರ್ ಲಾರಿ ತುಂಬುವಷ್ಟು ಮರಳನ್ನು ಸಂಗ್ರಹಿಸಿಟ್ಟಿರುವುದು ಕಂಡು ಬಂದಿದ್ದು, ಈ ಬಗ್ಗೆ ವಿಚಾರಿಸಿದಾಗ ಮರಳು ಸಂಗ್ರಹಿಸಿದ್ದಕ್ಕೆ ಯಾವುದೇ ಪರವಾನಿಗೆ ಇರುವುದು ಕಂಡು ಬಂದಿಲ್ಲ. ಮರಳನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಮರಳಿನ ಮೌಲ್ಯ 70 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ವಶಕ್ಕೆ ಪಡೆದ ಮರಳನ್ನು ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಮಂಗಳೂರು ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತ ರಾಮರಾವ್ ಮಾರ್ಗದರ್ಶನದಲ್ಲಿ ನಡೆದ ಮರಳು ಪತ್ತೆ ಕಾರ್ಯಾಚರಣೆಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎಸ್.ಎಚ್. ಭಜಂತ್ರಿ, ಪೊಲೀಸ್ ಉಪನಿರೀಕ್ಷಕ ವೆಂಕಟೇಶ್ ಐ. ಮತ್ತು ಸಿಬ್ಬಂದಿ ಭಾಗವಹಿಸಿದ್ದರು.