ಭಾಗವತ ಎಂ. ನಾರ್ಣಪ್ಪ ಉಪ್ಪೂರರ ಸಂಸ್ಮರಣೆ
ಉಡುಪಿ, ಜ.31: ದೈವದತ್ತವಾಗಿ ಒಲಿದು ಬಂದಿರುವ ಕಲಾ ಸಂಪತ್ತನ್ನು ಉಳಿಸಿಕೊಂಡು ಬಂದರೆ ಸಮಾಜದಲ್ಲಿ ಉತ್ತಮ ಜನಮನ್ನಣೆ ಸಿಗುತ್ತದೆ ಎಂಬುದಕ್ಕೆ ಯಕ್ಷಗಾನ, ಯಕ್ಷಲೋಕದ ಮಹಾನ್ ದಿಗ್ಗಜ ಭಾಗವತ ಎಂ. ನಾರ್ಣಪ್ಪ ಉಪ್ಪೂರರೇ ಸಾಕ್ಷಿ ಎಂದು ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಪೂರ್ಣಪ್ರಜ್ಞ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗ ಮತ್ತು ಭಾಗವತ ಎಂ. ನಾರ್ಣಪ್ಪ ಉಪ್ಪೂರು ಜನ್ಮ ಶತಮಾನೋತ್ಸವ ಸಮಿತಿ ಜಂಟಿ ಆಶ್ರಯದಲ್ಲಿ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಖ್ಯಾತ ಭಾಗವತ ಎಂ. ನಾರ್ಣಪ್ಪ ಉಪ್ಪೂರರ ಶತಸ್ಮೃತಿ ಸಂಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪ್ರಸ್ತುತ ಜನರು ಪುರಾಣದ ಕಥೆಗಳನ್ನು ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ ಮೂಲಕ ಮುಟ್ಟಿಸುವ ಯಕ್ಷಗಾನದತ್ತ ಹೆಚ್ಚಿನ ಆಸಕ್ತಿ ತೋರಿಸುವ ಅಗತ್ಯವಿದೆ. ಯಕ್ಷಗಾನದ ಸಂಪೂರ್ಣ ನಿಯಂತ್ರಣ ಭಾಗವತರ ಕೈಯಲ್ಲಿರುತ್ತದೆ. ನಾರ್ಣಪ್ಪ ಉಪ್ಪೂರರು ಅದನ್ನು ಬಹಳ ಆರಾಮವಾಗಿ ನಿಭಾಯಿಸುತಿದ್ದರೆಂದು ಹೇಳಿದ ಅದಮಾರು ಶ್ರೀಗಳು, ಇಂದು ಯಕ್ಷಗಾನ ಕಲೆ ಹಳ್ಳಿಯನ್ನು ದಾಟಿ ರಾಷ್ಟ್ರಮಟ್ಟ ದಲ್ಲಿ ಗುರುತಿಸುವಂತಾಗಿದೆ ಎಂದರು.
ಖ್ಯಾತ ಭಾಗವತ, ಉಪ್ಪೂರರ ಶಿಷ್ಯ ಸುಬ್ರಹ್ಮಣ್ಯ ಧಾರೇಶ್ವರ ಮಾತನಾಡಿ, ನಾರ್ಣಪ್ಪ ಉಪ್ಪೂರು ನನ್ನ ಪಾಲಿಗೆ ದೊಡ್ಡ ಗುರು. ನನ್ನ ಬದುಕಿನ ಸೂತ್ರಧಾರಿ. ಶಿಕ್ಷೆ, ಶಿಕ್ಷಣವನ್ನು ಅತಿಯಾಗಿ ಹೇರುತ್ತಿರಲಿಲ್ಲ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಗದೀಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ್ಪೂರರ ಪುತ್ರ ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಎಂ.ಶ್ರೀಧರ ಉಪ್ಪೂರು ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಪ್ರಾರ್ಥಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ.ಶ್ರೀಕಾಂತ್ ರಾವ್ ಸಿದ್ಧಾಪುರ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಶಿವಕುಮಾರ್ ವಂದಿಸಿದರು. ಮಂಜುನಾಥ ಕರಬ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಬ್ರಹ್ಮಣ್ಯ ಧಾರೇಶ್ವರರಿಂದ ಯಕ್ಷಗಾನ ಭಾಗವತಿಕೆ ಪ್ರಾತ್ಯಕ್ಷಿಕೆ ನಡೆಯಿತು.