ಅಮೆರಿಕ: ಹಿಂದೂ ದೇವಸ್ಥಾನ ಧ್ವಂಸ; ವಿಗ್ರಹಕ್ಕೆ ಮಸಿ ಎರಚಿದ ದುಷ್ಕರ್ಮಿಗಳು

Update: 2019-01-31 14:54 GMT

ವಾಷಿಂಗ್ಟನ್, ಜ.31: ಅಮೆರಿಕದಲ್ಲಿ ದ್ವೇಷಾಪರಾಧದ ಪ್ರಕರಣವೊಂದರಲ್ಲಿ ಕೆಂಟುಕಿಯಲ್ಲಿರುವ ಹಿಂದೂ ದೇವಸ್ಥಾನವನ್ನು ಭಗ್ನಗೊಳಿಸಿ ದೇವರ ವಿಗ್ರಹದ ಮುಖಕ್ಕೆ ಕಪ್ಪು ಬಣ್ಣ ಎರಚಿರುವ ಘಟನೆ ವರದಿಯಾಗಿದೆ. ಅಲ್ಲದೆ ದೇವಸ್ಥಾನದ ಸಭಾಂಗಣದಲ್ಲಿದ್ದ ಕುರ್ಚಿಯೊಂದನ್ನು ಚೂರಿಯಿಂದ ಇರಿದು ಹಾಳುಗೆಡವಲಾಗಿದೆ.

ಲೂಯಿಸ್‌ವಿಲ್ ನಗರದಲ್ಲಿರುವ ಸ್ವಾಮಿ ನಾರಾಯಣ ದೇವಸ್ಥಾನದಲ್ಲಿ ರವಿವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗಿನ ಅವಧಿಯಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನದ ಕಿಟಕಿಗಳನ್ನು ಮುರಿದು, ವಿಗ್ರಹದ ಮುಖಕ್ಕೆ ಮತ್ತು ಗೋಡೆಗೆ ಕಪ್ಪು ಬಣ್ಣ ಎರಚಿರುವ ದುಷ್ಕರ್ಮಿಗಳು ಗೋಡೆಯ ಮೇಲೆ ಅನುಚಿತ ಬರಹ ಮತ್ತು ಚಿತ್ರಗಳನ್ನು ರಚಿಸಿದ್ದಾರೆ. ದೇವಸ್ಥಾನದ ಸಭಾಂಗಣದಲ್ಲಿದ್ದ ಕುರ್ಚಿಯನ್ನು ಚೂರಿಯಿಂದ ಹರಿದು ಹಾಕಿ, ಕುರ್ಚಿಗೆ ಚೂರಿಯನ್ನು ಚುಚ್ಚಿ ಇಡಲಾಗಿದೆ. ಈ ಘಟನೆ ಪ್ರದೇಶದಲ್ಲಿ ನೆಲೆಸಿರುವ ಭಾರತ-ಅಮೆರಿಕನ್ ಸಮುದಾಯದ ಜನರಿಗೆ ಆಘಾತ ಉಂಟು ಮಾಡಿದೆ. ಇದೊಂದು ದ್ವೇಷಾಪರಾಧದ ಪ್ರಕರಣವೆಂದು ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

 ಘಟನೆಯನ್ನು ಖಂಡಿಸಿರುವ ಲೂಯಿಸ್‌ವಿಲ್ ಮೇಯರ್ ಗ್ರೆಗ್ ಫಿಷರ್ ಇದರ ವಿರುದ್ಧ ನಗರದ ಜನತೆ ಒಗ್ಗೂಡಬೇಕು. ಧರ್ಮಾಂಧತೆ ಅಥವಾ ದ್ವೇಷಾಪರಾಧದ ಘಟನೆ ನಡೆದಾಗಲೆಲ್ಲಾ ನಾವು ಅದನ್ನು ವಿರೋಧಿಸಿದ್ದೇವೆ. ಹೇಡಿಗಳ ಈ ಕೃತ್ಯವು ನಮ್ಮ ಸಮುದಾಯದಲ್ಲಿ ಸಹಾನುಭೂತಿ, ವಿವೇಚನೆಯ ಗುಣವನ್ನು ಇನ್ನಷ್ಟು ವೃದ್ಧಿಸಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ವಾಸಿಸುತ್ತಿರುವ ಎಲ್ಲರನ್ನೂ ಸಮಾನರಾಗಿ ಕಾಣಲಾಗುತ್ತದೆ ಮತ್ತು ಪ್ರತಿಯೊಬ್ಬರ ಭಾವನೆಗಳಿಗೂ ಗೌರವ ನೀಡುವ ದೇಶ ನಮ್ಮದು. ದುಷ್ಕರ್ಮಿಗಳು ದೇವಸ್ಥಾನದ ಗೋಡೆಯಲ್ಲಿ ಅಸಂಗತವಾದ ದ್ವೇಷ ಸಂದೇಶ ಬರೆದಿದ್ದಾರೆ. ಧರ್ಮ ಯಾವುದೇ ಇರಲಿ, ಇಂತಹ ವರ್ತನೆ ಸಮರ್ಥನೀಯವಲ್ಲ ಎಂದು ಫಿಷರ್ ಹೇಳಿದ್ದಾರೆ. ಅವರು ಬುಧವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದೊಂದು ದುಃಖಕರ ಘಟನೆ ಎಂದಿರುವ ಲೂಯಿಸ್‌ವಿಲ್ ಮೆಟ್ರೊ ಪೊಲೀಸ್ ಇಲಾಖೆಯ ಮುಖ್ಯಸ್ಥ ಸ್ಟೀವ್ ಕೊನ್ರಾಡ್, ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಶಿಕ್ಷಿಸಲಾಗುವುದು . ಪೊಲೀಸರು ದೇವಸ್ಥಾನಕ್ಕೆ ಹೆಚ್ಚುವರಿ ಭದ್ರತೆ ಒದಗಿಸಲಿದ್ದಾರೆ ಎಂದಿದ್ದಾರೆ. ಕೆಂಟುಕಿ ಜನರಲ್ ಅಸೆಂಬ್ಲಿಗೆ ಆಯ್ಕೆಯಾಗಿರುವ ಪ್ರಪ್ರಥಮ ಭಾರತೀಯ ಅಮೆರಿಕನ್ ಪ್ರತಿನಿಧಿಯಾಗಿರುವ ನೀಮಾ ಕುಲಕರ್ಣಿ ಘಟನೆಯನ್ನು ಖಂಡಿಸಿದ್ದಾರೆ. ನಮ್ಮ ಧರ್ಮ ಹಾಗೂ ಸಮುದಾಯವನ್ನು ದುರ್ಬಲಗೊಳಿಸಲು ಮಾಡಿರುವ ಬೆದರಿಕೆಯ ಕೃತ್ಯ ಇದಾಗಿದೆ ಎಂದವರು ಹೇಳಿದ್ದಾರೆ. ಈ ಹಿಂದೆಯೂ ಹಲವು ಬಾರಿ ಅಮೆರಿಕದಲ್ಲಿ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News