ಉಡುಪಿ ಜಿಲ್ಲೆಯಲ್ಲಿ ಪ.ಜಾತಿ, ಗಿರಿಜನ ಉಪಯೋಜನೆ: ಸಾಧನೆ ತೋರದ ಗ್ರಾಪಂ ಗಳಿಗೆ ನೋಟಿಸ್ ಜಾರಿ
ಮಣಿಪಾಲ, ಜ.31: ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ತಮ್ಮ ಪಂಚಾಯತ್ ನಿಧಿಯಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪ ಯೋಜನೆಗೆ ನಿಗದಿಪಡಿಸಲಾಗಿರುವ ಅನುದಾನದಲ್ಲಿ ಇದುವರೆಗೆ ಶೇ.50ಕ್ಕಿಂತ ಕಡಿಮೆ ಸಾಧನೆ ತೋರಿರುವ ಪಂಚಾಯತ್‌ಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆಗಳನ್ನು ನೀಡಿದ್ದಾರೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನಿಗದಿತ ಸಾಧನೆಯಾಗಿಲ್ಲ. ಈಗಾಗಲೇ ಆರ್ಥಿಕ ವರ್ಷ ಮುಕ್ತಾಯದ ಹಂತದಲ್ಲಿದ್ದು, ಇದುವರೆಗೂ ನಿರೀಕ್ಷಿತ ಸಾಧನೆ ಮಾಡದಿರುವುದಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಅಪರ ಜಿಲ್ಲಾಧಿಕಾರಿ, ಶೇ.50ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿರುವ ಗ್ರಾಪಂಗಳಿಗೆ ಕಾರಣ ಕೇಳಿ ನೊಟೀಸ್ ನೀಡುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ಸೂಚಿಸಿದರು.
ಎಲ್ಲಾ ಗ್ರಾಮ ಪಂಚಾಯತ್‌ಗಳು ಆರ್ಥಿಕ ವರ್ಷ ಮುಕ್ತಾಯದೊಳಗೆ ಸಂಪೂರ್ಣ ಗುರಿ ಸಾಧಿಸುವಂತೆ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ವಿದ್ಯಾಕುಮಾರಿ ಸಂಬಂಧಿತರಿಗೆ ತಿಳಿಸಿದರು.
ಎಲ್ಲಾ ಇಲಾಖೆಗಳು ನಿಗದಿಪಡಿಸಿದ ಆರ್ಥಿಕ ಮತ್ತು ಭೌತಿಕ ಗುರಿಯನ್ನು ಮಾರ್ಚ್ ಅಂತ್ಯದೊಳಗೆ ಸಂಪೂರ್ಣವಾಗಿ ಸಾಧಿಸುವಂತೆ ಹಾಗೂ ಯಾವುದೇ ಕಾರಣಕ್ಕೂ ಯೋಜನೆಯ ಹಣ ವ್ಯರ್ಥವಾಗದಂತೆ ಪ.ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಸೌಲ್ಯಗಳನ್ನು ಒದಗಿಸುವಂತೆ ಅಪರ ಜಿಲ್ಲಾಧಿಕಾರಿ ನಿರ್ದೇಶನಗಲನ್ನು ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಭುಜಬಲಿ ಹಾಗೂ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.