×
Ad

ದಲಿತ ಸ್ಮಾರಕ ಹಗರಣ ಪ್ರಕರಣ: ಲಕ್ನೋದಲ್ಲಿ ಇಡಿ ಶೋಧ ಕಾರ್ಯಾಚರಣೆ

Update: 2019-01-31 21:50 IST

ಲಕ್ನೋ,ಜ.31: ಉತ್ತರ ಪ್ರದೇಶದಾದ್ಯಂತ ದಲಿತ ನಾಯಕರಿಗಾಗಿ ಸ್ಮಾರಕಗಳ ನಿರ್ಮಾಣದಲ್ಲಿ ನಡೆದಿದೆಯೆನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ)ವು ಗುರುವಾರ ಲಕ್ನೋದ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ. ಬಿಎಸ್‌ಪಿ ನಾಯಕಿ ಮಾಯಾವತಿ ಅವರು 2002-2007ರ ಅವಧಿಯಲ್ಲಿ ತನ್ನ ಪಕ್ಷದ ಸರಕಾರವು ಅಧಿಕಾರದಲ್ಲಿದ್ದಾಗ ಈ ಸ್ಮಾರಕಗಳನ್ನು ನಿರ್ಮಿಸಿದ್ದರು.

 ರಾಜ್ಯ ಜಾಗ್ರತ ಇಲಾಖೆಯು 2014ರಲ್ಲಿ ನೀಡಿದ್ದ ದೂರಿನ ಆಧಾರದಲ್ಲಿ ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಇಡಿ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಸ್ಮಾರಕಗಳ ನಿರ್ಮಾಣಗಳಲ್ಲಿ,ವಿಶೇಷವಾಗಿ ಬಿಎಸ್‌ಪಿಯ ಚುನಾವಣಾ ಚಿಹ್ನೆ ಆನೆಗಳ ವಿಗ್ರಹಗಳು ಮತ್ತು ಅದರ ಸಂಸ್ಥಾಪಕ ಕಾನ್ಶಿರಾಂ ಅವರ ಸ್ಮಾರಕಗಳ ನಿರ್ಮಾಣದಲ್ಲಿ ಅಕ್ರಮಗಳು ನಡೆದಿದ್ದು,ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ 111 ಕೋ.ರೂ.ಗಳ ನಷ್ಟವುಂಟಾಗಿದೆ ಎಂದು ಇಲಾಖೆಯು ದೂರಿನಲ್ಲಿ ಆರೋಪಿಸಿತ್ತು.

ಸ್ಮಾರಕಗಳಿಗಾಗಿ ಮರಳುಶಿಲೆಗಳ ಖರೀದಿಯಲ್ಲಿ ಅಕ್ರಮಗಳನ್ನು ನಡೆಸಿದ್ದಕ್ಕಾಗಿ ಮಾಯಾವತಿ ಸರಕಾರದ ಇಬ್ಬರು ಸಚಿವರು ಮತ್ತು 12 ಬಿಎಸ್‌ಪಿ ಶಾಸಕರ ವಿರುದ್ಧ ಉತ್ತರ ಪ್ರದೇಶ ಲೋಕಾಯುಕ್ತವು ದೋಷಾರೋಪಗಳನ್ನು ಹೊರಿಸಿತ್ತು. ಲೋಕಾಯುಕ್ತ ವರದಿಯನ್ನು ಆಧರಿಸಿ ಜಾಗ್ರತ ಇಲಾಖೆಯು ಪ್ರಕರಣವನ್ನು ದಾಖಲಿಸಿತ್ತು.

 2019ರ ಲೋಕಸಭಾ ಚುಣಾವನೆಗಾಗಿ ಬಿಎಸ್‌ಪಿ ಮತ್ತು ಅಖಿಲೇಶ್ ಯಾದವ ಅವರ ಎಸ್‌ಪಿ ಉ.ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿವೆ. ಕಳೆದ ತಿಂಗಳು ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಉ.ಪ್ರದೇಶ ಮತ್ತು ದಿಲ್ಲಿಯ 14 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು. ಈ ಸಂಬಂಧ 2012-17ರ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್ ಮತ್ತು ಮಾಜಿ ಸಚಿವ ಗಾಯತ್ರಿಪ್ರಸಾದ ಪ್ರಜಾಪತಿ ಅವರನ್ನು ಸಿಬಿಐ ತನಿಖೆಗೊಳಪಡಿಸಬಹುದು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News