ಉಡುಪಿ: ಗುರುವಾರ ಮತ್ತೆ 5 ಮಂಗಗಳ ಶವ ಪತ್ತೆ

Update: 2019-01-31 16:28 GMT

ಉಡುಪಿ, ಜ.31: ಉಡುಪಿ ಜಿಲ್ಲೆಯಲ್ಲಿ ಗುರುವಾರ ಮತ್ತೆ ಐದು ಮಂಗಗಳ ಕಳೇಬರ ಪತ್ತೆಯಾಗಿದ್ದು, ಕುಂದಾಪುರ ತಾಲೂಕಿನ ಬಿದ್ಕಲ್‌ಕಟ್ಟೆ, ಉಡುಪಿ ತಾಲೂಕಿನ ಮಂದಾರ್ತಿ, ಕುಕ್ಕೆಹಳ್ಳಿ ಹಾಗೂ ಮಣಿಪುರ ಹಾಗೂ ಕಾರ್ಕಳ ತಾಲೂಕಿನ ಹೆಬ್ರಿಯಲ್ಲಿ ಇವು ಪತ್ತೆಯಾಗಿವೆ. ಇವುಗಳಲ್ಲಿ ಬಿದ್ಕಲಕಟ್ಟೆ ಮತ್ತು ಕುಕ್ಕೆಹಳ್ಳಿಗಳ ಮಂಗಗಳ ಪೋಸ್ಟ್‌ಮಾರ್ಟಂ ಮಾಡಿ ವಿಸೇರಾವನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

ಇದರಿಂದ ಜ.8ರ ಬಳಿಕ ಜಿಲ್ಲೆಯಲ್ಲಿ ಒಟ್ಟು 108 ಮಂಗಗಳ ಕಳೇಬರ ಪತ್ತೆಯಾಗಿದ್ದು, ಇವುಗಳಲ್ಲಿ 38 ಮಂಗಗಳ ಅಟಾಪ್ಸಿ ನಡೆಸಲಾಗಿದೆ. ಇದರಲ್ಲಿ 33ರ ಪರೀಕ್ಷಾ ವರದಿ ಬಂದಿದ್ದು, 12 ಮಂಗಗಳಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾದರೆ, ಇನ್ನುಳಿದ 21ರಲ್ಲಿ ಕಾಯಿಲೆ ಇದ್ದಿರಲಿಲ್ಲ. ನಿನ್ನೆ ಮತ್ತು ಇಂದು ಶಂಕಿತ ಮಾನವನ ಯಾವುದೇ ರಕ್ತದ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಿಲ್ಲ. ಈವರೆಗೆ ರಕ್ತ ಪರೀಕ್ಷೆ ನಡೆಸಿದ 11 ಮಂದಿಯ ರಕ್ತದಲ್ಲೂ ಕಾಯಿಲೆಯ ಚಿಹ್ನೆ ಪತ್ತೆಯಾಗಿಲ್ಲ ಎಂದು ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

344 ಮಂದಿಗೆ ಲಸಿಕೆ: ಕುಂದಾಪುರ ಮತ್ತು ಕಾರ್ಕಳ ತಾಲೂಕಿನಲ್ಲಿ ಈವರೆಗೆ ಒಟ್ಟು 344 ಮಂದಿಗೆ ಮಂಗನ ಕಾಯಿಲೆ ವಿರುದ್ಧದ ಲಸಿಕೆಯನ್ನು ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರೋಹಿಣಿ ತಿಳಿಸಿದ್ದಾರೆ. ಮಂಗಳವಾರ ಶಂಕರನಾರಾಯಣದಲ್ಲಿ ಎಎನ್‌ಎಫ್‌ನ 24, ಅರಣ್ಯ ಇಲಾಖೆಯ 130 ಹಾಗೂ ಆರೋಗ್ಯ ಇಲಾಖೆಯ 51 ಮಂದಿ ಸೇರಿ 224 ಮಂದಿಗೆ ವ್ಯಾಕ್ಸಿನ್ ನೀಡಲಾಗಿತ್ತು.

ಬುಧವಾರ ಕಾರ್ಕಳ ಹಿರ್ಗಾನದ ಅರಣ್ಯ ಇಲಾಖೆಯ 21 ಹಾಗೂ ಆರೋಗ್ಯ ಇಲಾಖೆಯ 29 ಮಂದಿ ಸೇರಿ 50ಮಂದಿಗೆ ಲಸಿಕೆ ನೀಡಿದ್ದರೆ, ಇಂದು ಹೆಬ್ರಿಯಲ್ಲಿ ಇನ್ನು 70 ಮಂದಿ ಲಸಿಕೆಯನ್ನು ನೀಡಲಾಗಿದೆ ಎಂದು ಡಾ.ರೋಹಿಣಿ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News