×
Ad

ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ?

Update: 2019-01-31 22:12 IST

ಉಡುಪಿ, ಜ.31: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ಹೊರಜಗತ್ತಿನ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟಿನಲ್ಲಿದ್ದ 7 ಮಂದಿ ಮೀನುಗಾರರಲ್ಲಿ ಉತ್ತರ ಕನ್ನಡ ಜಿಲ್ಲೆಯಇಬ್ಬರ ಮೊಬೈಲ್ ಫೋನ್‌ಗಳು ರಿಂಗ್ ಆಗಿದ್ದು, ಮತ್ತೊಮ್ಮೆ ಕರೆ ಮಾಡಿದಾಗ ಮರುಸಂಪರ್ಕ ಸಿಗದ ಬಗ್ಗೆ ಉತ್ತರ ಕನ್ನಡದಿಂದ ಮಾಹಿತಿ ಬಂದಿದೆ.

ಮೀನುಗಾರರು ಕಣ್ಮರೆಯಾಗಿ ಇದೀಗ 45 ದಿನಗಳೇ ಕಳೆದಿದ್ದು, ಫೋನ್ ರಿಂಗ್ ಆಗಿರುವುದು ಕುಟುಂಬಿಕರಲ್ಲಿ ಆಸೆ ಚಿಗುರುವಂತೆ ಮಾಡಿದೆ. ಒಂದಲ್ಲ ಎರಡೆರಡು ಬಾರಿ ಫೋನ್ ರಿಂಗ್ ಆಗಿದೆ. ಆದರೆ ಪೊಲೀಸರು ಈ ವರದಿಯನ್ನೇ ನಿರಾಕರಿಸಿದ್ದಾರೆ. ಈ ಬಗ್ಗೆ ಯಾವುದೇ ತಾಂತ್ರಿಕ ಸಾಕ್ಷಿಗಳಿಲ್ಲ. ಈಗಾಗಲೇ ಇದನ್ನು ಪರಿಶೀಲಿಸಲಾಗಿದ್ದು, ಇದೊಂದು ಸುಳ್ಳು ಸುದ್ದಿ ಎಂದು ತಳ್ಳಿ ಹಾಕಿದ್ದಾರೆ.

ಈ ಕುರಿತು ಮಲ್ಪೆ ಮೀನುಗಾರರ ಸಂಘದ ಕಾರ್ಯದರ್ಶಿ ಗೋಪಾಲ್ ಆರ್.ಕೆ. ಇವರನ್ನು ಸಂಪರ್ಕಿಸಿದಾಗ, ಇಂಥ ಮಾಹಿತಿಗಳು ನಮಗೂ ಬಂದಿದ್ದು, ಆದರೆ ಇದನ್ನು ಯಾರೂ ಖಚಿತಪಡಿಸುತ್ತಿಲ್ಲ. ಎಲ್ಲವೂ ಅಂತೆ-ಕಂತೆಗಳಲ್ಲೇ ಇದ್ದು, ಸ್ಪಷ್ಟತೆ ಇಲ್ಲ. ಹೀಗಾಗಿ ಈ ಸುದ್ದಿಯನ್ನು ನಾವು ಖಚಿತಪಡಿಸಲು ಸಾದ್ಯವಾಗುತ್ತಿಲ್ಲ ಎಂದರು.

ಉತ್ತರ ಕನ್ನಡದಿಂದ ಬಂದ ವರದಿಯಂತೆ ಕುಮಟಾದ ಲಕ್ಷ್ಮಣ ಅವರ ಮಗಳು ಬುಧವಾರ ಸಂಜೆ 7:30ಕ್ಕೆ ಮೊಬೈಲ್‌ಗೆ ಕರೆ ಮಾಡಿದ್ದು, ಆಗ ಫೋನ್ ರಿಂಗ್ ಆಗಿದೆ. ಬಳಿಕ ಮತ್ತೊಮ್ಮೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ‘ರಾತ್ರಿ 10 ಗಂಟೆಗೆ ಸ್ವತಃ ನಾನೇ ಭಟ್ಕಳದ (ಪಾಂಡು) ರವಿ ಮಂಕಿ ಅವರ ಪೋನ್‌ಗೆ ಕರೆ ಮಾಡಿದ್ದೇನೆ. ಆಗ ರಿಂಗ್ ಆಗಿದ್ದು, ಬಳಿಕ ಇನ್‌ಕಮಿಂಗ್ ಕಾಲ್ ಸಂಪರ್ಕ ಕಡಿತವಾಗಿದೆ ಎನ್ನುವ ಸಂದೇಶ ಬಂದಿದೆ ಎನ್ನುತ್ತಾರೆ ಉತ್ತರ ಕನ್ನಡ ಜಿಲ್ಲೆ ಭಟ್ಕಳ ನಿವಾಸಿ ನಾಪತ್ತೆಯಾದ ಹರೀಶ್ ಅವರ ಮಾವ ಪಾಂಡು ಮೊಗೇರ.

ಗುರುವಾರ ಬೆಳಗ್ಗೆ 8 ಗಂಟೆಗೆ ನಾನು ಮತ್ತೆ ಅದೇ ನಂಬರ್‌ಗೆ ಕರೆ ಮಾಡಿದ್ದು, ರಿಂಗ್ ಕೇಳಿಸಿದೆ. ಈ ಬಗ್ಗೆ ಕಾರವಾರ ಡಿವೈಎಸ್ಪಿ, ಕರಾವಳಿ ಕಾವಲು ಪಡೆ, ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಮುಖಂಡರ ಗಮನಕ್ಕೂ ತಂದಿದ್ದೇವೆ ಎಂದು ಮಾಹಿತಿ ನೀಡಿದರು.

ವಾರದೊಳಗೆ ಹೋರಾಟ: ಉತ್ತರ ಕನ್ನಡದ ಸಂಸದ, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರಲ್ಲಿ ಜ.26ರೊಳಗೆ ಹುಡುಕಿ ಕೊಡದೇ ಹೋದರೆ ಪ್ರತಿಭಟನೆ ಮಾಡುವ ಬಗ್ಗೆ ಎಚ್ಚರಿಕೆ ಕೊಟ್ಟಿದ್ದೇವೆ. 7 ಮಂದಿ ಮೀನುಗಾರರ ಕಣ್ಮರೆ ಪ್ರಕರಣವನ್ನು ಯಾರೊಬ್ಬರೂ ಗಂಭೀರವಾಗಿ ತೆಗೆದು ಕೊಂಡಿಲ್ಲ. ರಾಜ್ಯ ಸರಕಾರವನ್ನು ಪ್ರಶ್ನಿಸುವ ಕೆಲಸವೂ ಮಾಡಿಲ್ಲ. ಇದನ್ನೆಲ್ಲ ಖಂಡಿಸಿ ವಾರದೊಳಗೆ ದ.ಕ. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಉಗ್ರ ಹೋರಾಟ ಮಾಡುವುದಾಗಿ ಪಾಂಡು ಮೊಗೇರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News